ಬಹುತೇಕ ವಾಹನ ಸವಾರರು ಪ್ರಯಾಣಿಸುವಾಗ ಜಿಪಿಎಸ್ (Global Positioning System) ಆಧರಿಸಿ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಆದರೆ ಜಿಪಿಎಸ್ ನೋಡಿಕೊಂಡು ವಾಹನ ಚಲಾಯಿಸುವಾಗ ಎಡವಟ್ಟುಗಳು ಆಗಿರುವುದು ಸಾಕಷ್ಟು ಘಟನೆಗಳು ನಡೆದಿದ್ದು, ಇದೀಗ ಇಂತಹ ಎಡವಟ್ಟಿನಿಂದ ಮೂವರು ಮೃತಪಟ್ಟಿರುವ ಘಟನೆ ಆಘಾತಕಾರಿ ಉತ್ತರಪ್ರದೇಶದಲ್ಲಿ ನಡೆದಿದೆ.
ಜಿಪಿಎಸ್ ನೋಡಿಕೊಂಡು ಹೊರಟ್ಟಿದ್ದ ಕಾರು ಪಾಳುಬಿದ್ದ ಸೇತುವೆ ಮೇಲಿಂದ 50 ಆಳದ ನದಿಗೆ ಬಿದ್ದಿದ್ದರಿಂದ ಸೋದರರು ಸೇರಿದಂತೆ ಮೂವರು ಮೃತಪಟ್ಟ ದಾರುಣ ಘಟನೆ ಬಾದೌನ್ ಜಿಲ್ಲೆಯ ಡಾಟಾಗಂಜ್ ನ ಫರಿದಪುರ್ ನಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಬರೇಲಿಯಿಂದ ಡಾಟಾಗಂಜ್ ಗೆ ವ್ಯಾಗನ್ ನಲ್ಲಿ ಮೂವರು ಹೊರಟ್ಟಿದ್ದು, ಜಿಪಿಎಸ್ ನೋಡಿಕೊಂಡು ದುರಸ್ಥಿಯಲ್ಲಿದ್ದ ಸೇತುವೆ ಮೇಲೆ ಹೋಗಿದ್ದು, 50 ಅಡಿ ಮೇಲಿಂದ ರಾಮಗಂಗಾ ನದಿಗೆ ಬಿದ್ದಿದೆ. ಕಾರು ಬಿದ್ದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರು ಬಿದ್ದಿದ್ದನ್ನು ಗಮನಿಸಿ ಸ್ಥಳೀಯರು ಸ್ಥಳಕ್ಕೆ ಬಂದಾಗ ಕಾರಿನಲ್ಲಿ ಮೂವರ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೆಲವು ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದ್ದು, ಇದರಿಂದ ಸೇತುವೆಯ ಒಂದು ಭಾಗ ಕುಸಿದುಬಿದ್ದಿತ್ತು. ಇದು ದುರಸ್ತಿ ಆಗದೇ ಇರುವುದು ಜಿಪಿಎಸ್ ನಲ್ಲಿ ಅಪ್ ಡೇಟ್ ಆಗಿರಲಿಲ್ಲ. ಇದರಿಂದ ದುರಂತ ಸಂಭವಿಸಿದೆ ಎಂದು ಸ್ಥಳೀಯ ಸರ್ಕಲ್ ಇನ್ ಸ್ಪೆಕ್ಟರ್ ತಿಳಿಸಿದ್ದಾರೆ.
ಗೂಗಲ್ ಮ್ಯಾಪ್ ನೋಡಿಕೊಂಡು ಹೋಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಇದಕ್ಕೆ ಸರ್ಕಾರಿ ಅಧಿಕಾರಿಗಳು ಕಾರಣ. ಅಲ್ಲದೇ ಜಿಪಿಎಸ್ ಅಪ್ ಡೇಟ್ ಮಾಡದೇ ಇದ್ದರೂ ಸೇತುವೆ ಮೇಲೆ ಹೋಗದಂತೆ ಬ್ಯಾರಿಕೇಡ್ ಹಾಕಿರಲಿಲ್ಲ. ಅಲ್ಲದೇ ಎಚ್ಚರಿಕೆ ಸಂದೇಶಗಳೂ ಇರಲಿಲ್ಲ ಎಂದು ಮೃತರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.