Monday, September 16, 2024
Google search engine
Homeತಾಜಾ ಸುದ್ದಿಬಿಟಿವಿ ಮಾಲೀಕ ಜಿಎಂ ಕುಮಾರ್ ಗೆ ಬಿಗ್ ರಿಲೀಫ್: ಕೇಸ್ ವಾಪಸ್ ಪಡೆಯುವಂತೆ ರಾಜ್ಯಪಾಲರ ಸೂಚನೆ!

ಬಿಟಿವಿ ಮಾಲೀಕ ಜಿಎಂ ಕುಮಾರ್ ಗೆ ಬಿಗ್ ರಿಲೀಫ್: ಕೇಸ್ ವಾಪಸ್ ಪಡೆಯುವಂತೆ ರಾಜ್ಯಪಾಲರ ಸೂಚನೆ!

ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಸುದ್ದಿವಾಹಿನಿ ಬಿಟಿವಿ ಮಾಲೀಕ ಜಿಎಂ ಕುಮಾರ್ ವಿರುದ್ಧದ ಪ್ರಕರಣವನ್ನು ಕೂಡಲೇ ವಾಪಸ್ ಪಡೆಯುವಂತೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಈ ಮೂಲಕ ಜಿಎಂ ಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.

ಬಿಟಿವಿ ಮಾಲಿಕರು ಆಗಿರುವ ಹಿರಿಯ ಪತ್ರಕರ್ತ ಜಿ ಎಂ ಕುಮಾರ್ ಮೇಲಿನ ಕೇಸ್ ವಾಪಸ್ ಪಡೆಯುವಂತೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ತಮ್ಮ ವಿರುದ್ಧ  ವಿಜಯನಗರ ಕ್ಷೇತ್ರದ  ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಮತ್ತು ಅವರ ಪುತ್ರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ  ಪ್ರಿಯಕೃಷ್ಣ ಒತ್ತಡದಿಂದ ಕೇಸ್ ದಾಖಲಿಸಲಾಗಿತ್ತು. ಬಸವೇಶ್ವರ ನಗರ ಠಾಣೆಯ ಇನ್ಸ್​ಪೆಕ್ಟರ್​ ಚಾರ್ಜ್​ಶೀಟ್ ಹಾಕಿಸಿದ್ದರು ಎಂದು ಜಿ ಎಂ ಕುಮಾರ್ ದೂರು ನೀಡಿದ್ದರು.

ಮಾನವ ಹಕ್ಕುಗಳ ಆಯೋಗದ ವರದಿ, ಇನ್ಸ್​ಪೆಕ್ಟರ್ ಮಾತನಾಡಿದ್ದ ಆಡಿಯೋ ಸಾಕ್ಷಿ ಸೇರಿ ಹಲವು ಸಾಕ್ಷಿಗಳನ್ನು ರಾಜ್ಯಪಾಲರಿಗೆ ಜಿಎಂ ಕುಮಾರ್ ಒದಗಿಸಿದ್ದರು. ತಮ್ಮ ವಿರುದ್ಧದ ಸುಳ್ಳು ಮೊಕದ್ದಮೆ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದರು. ಇದೀಗ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿರುವ ರಾಜ್ಯಪಾಲರು, ಹಿರಿಯ ಪತ್ರಕರ್ತ ಜಿ ಎಂ ಕುಮಾರ್ ಮೇಲಿನ ಕೇಸ್​ಗಳನ್ನು ಕಾನೂನು ರೀತ್ಯಾ ಹಿಂಪಡೆಯುವಂತೆ ಡಿಜಿ-ಐಜಿಪಿ ಮತ್ತು ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ. 

ಪ್ರಕರಣದ ವಿವರ

ಹಿರಿಯ ಪತ್ರಕರ್ತ ಜಿ ಎಂ ಕುಮಾರ್ ಅವರು ತಮ್ಮ ಒಡೆತನದ ಬಿಟಿವಿ ಸುದ್ದಿ ವಾಹಿನಿಯಲ್ಲಿ, ಮಾಜಿ ಸಚಿವ ಕೃಷ್ಣಪ್ಪ ಕುಟುಂಬದ ಅಕ್ರಮ ಆಸ್ತಿ, ಜಮೀನು ಕಬಳಿಕೆ ಪ್ರಕರಣವನ್ನು ದಾಖಲೆ ಸಮೇತ ಬಯಲು ಮಾಡಿದ್ದರು. ಇದರಿಂದ ತೀವ್ರ ಮುಜುಗರ ಹಾಗೂ ಅವಮಾನಕ್ಕೀಡಾದ ಶಾಸಕ ಕೃಷ್ಣಪ್ಪ ತಮ್ಮ ಪಕ್ಷ  ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದರು.ಇದರ ಭಾಗವಾಗಿ ಬಸವೇಶ್ವರ ನಗರ ಪೊಲೀಸ್ ವ್ಯವಸ್ಥೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡರು.ಪೊಲೀಸರ  ಮೇಲೆ ಒತ್ತಡ ಹೇರಿ ಬಿ ರಿಪೋರ್ಟ್ ಆಗಬೇಕಿದ್ದ ಪ್ರಕರಣದಲ್ಲಿ ಎಫ್ ಐ ಆರ್ ಹಾಕಿಸಿ, ಚಾರ್ಜ್ ಶೀಟ್ ಮಾಡಿಸಿದ್ದರು.ಇದನ್ನು ಪೊಲೀಸ್ ಅಧಿಕಾರಿಗಳೇ ಖುದ್ದು ಫೋನ್ ಸಂಭಾಷಣೆಯಲ್ಲಿ ಬಹಿರಂಗಗೊಳಿಸಿದ್ದರು.ಇದೆಲ್ಲವೂ ರಾಜಕೀಯ ಒತ್ತಡದಿಂದ ಮಾಡಿರುವ ಕೇಸ್ ಎನ್ನುವುದು ಈಗ ದಾಖಲೆ ಸಮೇತ ಸಾಬೀತಾಗಿದೆ.

ಇನ್ಸ್ ಪೆಕ್ಟರ್ ತನ್ನ ಸೀನಿಯರ್ ಆಗಿದ್ದವರ ಜೊತೆ ಮಾತನಾಡುವ ಆಡಿಯೋದಲ್ಲಿ ಅಧಿಕಾರ ದುರ್ಬಳಕೆ ಹಗರಣ ಬಯಲಾಗಿದೆ. “ಕೃಷ್ಣಪ್ಪನವರ ಭೂ ಕಬಳಿಕೆ ಹಗರಣ ಹೊರ ತಂದಿದ್ದಕ್ಕಾಗಿ ಜಿ ಎಂ ಕುಮಾರ್ ಮೇಲೆ ಚಾರ್ಜ್ ಶೀಟ್ ಮಾಡಬೇಕಾಯಿತು”, “ಬಿ ರಿಪೋರ್ಟ್ ಮಾಡಬೇಕಿದ್ದ ಪ್ರಕರಣ ಕೃಷ್ಣಪ್ಪ ಒತ್ತಡದಿಂದ ಚಾರ್ಜ್ ಶೀಟ್ ಮಾಡಬೇಕಾಯಿತು” ಎಂದು ಇನ್ಸ್​ಪೆಕ್ಟರ್ ತಮ್ಮ ಹಿರಿಯ ಅಧಿಕಾರಿಯೊಬ್ಬರ ಜೊತೆ ಹೇಳಿಕೊಂಡಿದ್ದಾರೆ. ಫೋನ್ ಕರೆಯಲ್ಲಿ ಜಿ ಎಂ ಕುಮಾರ್ ವಿರುದ್ದ ಶಾಸಕ ಕೃಷ್ಣಪ್ಪ ಮಾಡಿರುವ ಅಧಿಕಾರ ದುರ್ಬಳಕೆ ಸ್ಪಷ್ಟವಾಗಿ ಬಯಲಾಗಿದೆ.

ಇನ್ಸ್​ಪೆಕ್ಟರ್ ಮಾತಾಡಿರುವ ಆಡಿಯೋ ಸಿಡಿ ಜೊತೆಗೆ ಎಸಿಪಿ, ಡಿಸಿಪಿ ರಿಪೋರ್ಟ್, ಮಾನವ ಹಕ್ಕು ಆಯೋಗದ ವರದಿಯನ್ನೂ ರಾಜ್ಯಪಾಲರಿಗೆ ಜಿಎಂ ಕುಮಾರ್ ಸಲ್ಲಿಸಿದ್ದರು. ಮಾನವ ಹಕ್ಕುಗಳ ಆಯೋಗದ ವರದಿಯಲ್ಲಿ, ಜಿ ಎಂ ಕುಮಾರ್ ವಿರುದ್ಧ ಏನೆಲ್ಲಾ ಪಿತೂರಿ ನಡೆಯಿತು, ಹೇಗೆಲ್ಲಾ ಕೇಸ್​ ಅನ್ನು ತಿರುಚಲಾಯಿತು, ಇನ್ಸ್​ಪೆಕ್ಟರ್ ಪಾತ್ರವೇನು? ಎಲ್ಲವನ್ನೂ ಕೂಡಾ ಅತ್ಯಂತ ವಿವರವಾಗಿ ದಾಖಲಿಸಲಾಗಿತ್ತು.

ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಅವರು ವಿಜಯನಗರ ಇನ್ಸ್​ಪೆಕ್ಟರ್ ಆಗಿದ್ದ ಸಂತೋಷ್ ಕುಮಾರ್ ಅವರನ್ನು ಬಳಸಿಕೊಂಡು ಅಧಿಕಾರ ದುರ್ಬಳಕೆ ಮಾಡಿ ತಮ್ಮ ವಿರುದ್ಧ ಚಾರ್ಜ್​ಶೀಟ್ ಮಾಡಿಸಿದ್ದಾರೆ ಎಂದು ದಾಖಲೆ ಸಮೇತ ಜಿ ಎಂ ಕುಮಾರ್​ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದ ಸಿಡಿ ಮತ್ತು ದಾಖಲೆಗಳನ್ನು ರಾಜ್ಯಪಾಲರಿಗೆ ನೀಡಿದ್ದರು. ಪತ್ರಕರ್ತರ ವಿರುದ್ಧ ನಡೆಯುತ್ತಿರುವ ಇಂತಹ ಪಿತೂರಿ, ದೌರ್ಜನ್ಯಗಳನ್ನು ಹತ್ತಿಕ್ಕಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅಲ್ಲದೆ ತಮ್ಮ ವಿರುದ್ಧ ಹಾಕಿರುವ ಸುಳ್ಳು ಚಾರ್ಜ್​​ಶೀಟ್ ಮತ್ತು FIR ಅನ್ನು ರದ್ದುಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ಕೊಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು.ಇದೀಗ, ಜಿ ಎಂ ಕುಮಾರ್ ದೂರನ್ನು ಪರಿಶೀಲಿಸಿ, ದಾಖಲೆಗಳನ್ನೆಲ್ಲಾ ಗಮನಿಸಿರುವ ರಾಜ್ಯಪಾಲರು, ಕೇಸ್​ಗಳನ್ನು ವಾಪಸ್ ಪಡೆಯುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ರಾಜ್ಯಪಾಲರ ಆದೇಶದಿಂದ ಸರ್ಕಾರಕ್ಕೆ ತೀವ್ರ ಹಿನ್ನಡೆಯಲ್ಲದೇ ಅವಮಾನವಾಗಿದೆ.ರಾಜಕಾರಣಿಗಳು ಅಕ್ರಮ ನಡೆಸಿದಾಗ ಅದರ ಮೇಲೆ ಬೆಳಕು ಚೆಲ್ಲುವ ಮೂಲಕ ಕರ್ತವ್ಯಪ್ರಜ್ನೆ ಮೆರೆದ  ಬಿಟಿವಿಗೆ ನೈತಿಕ ಗೆಲುವಾಗಿದೆ.ರಾಜಕಾರಣಿಗಳು ಇನ್ನಾದ್ರು ತಮ್ಮ ಸ್ವಾರ್ಥಕ್ಕಾಗಿ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಳ್ಳುವುದನ್ನು ಬಿಡಬೇಕು.ಇಲ್ಲವಾದರೆ ಎಂಥಾ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಬಿಟಿವಿ ಮಾಲೀಕರಾದ ಜಿಎಂ ಕುಮಾರ್ ಅವರ ಪ್ರಕರಣದಲ್ಲಿ ನೀಡಿರುವ ಆದೇಶ-ಸೂಚನೆಯೇ ಸ್ಪಷ್ಟ ನಿದರ್ಶನ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments