ಕನ್ನಡದ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ರ ಆವೃತ್ತಿಯಲ್ಲಿ ಕಿಚ್ಚನ ಚಪ್ಪಾಳೆ ಗಿಟ್ಟಿಸಿದ ಮೊದಲ ಸ್ಪರ್ಧಿಯಾಗಿ ಗ್ರಾಮೀಣ ಸೊಗಡಿನ ಗಾಯಕ ಹನುಮಂತು ಪಡೆದಿದ್ದಾರೆ.
ಬಿಗ್ ಬಾಸ್ 11ರ ಆವೃತ್ತಿ ಸೆಪ್ಟೆಂಬರ್ 29ರಂದು ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೆ ಗಲಾಟೆ, ಘರ್ಷಣೆಗಳೇ ನಡೆಯುತ್ತಿದ್ದು, ಯಾವುದೇ ಸ್ಪರ್ಧಿ ಕಿಚ್ಚನ ಚಪ್ಪಾಳೆ ಗಿಟ್ಟಿಸಲು ವಿಫಲರಾಗಿದ್ದರು.
ಸೆಪ್ಟೆಂಬರ್ 29ರಂದು ಆರಂಭವಾದ ರಿಯಾಲಿಟಿ ಶೋ ಮೊದಲ ವಾರವೇ ಘರ್ಷಣೆ, ಮಾತಿನ ಘರ್ಷಣೆಗಳಿಂದ ಗೊಂದಲದ ಗೂಡಾಗಿತ್ತು. ಎರಡನೇ ವಾರ ಕಿಚ್ಚನ ಚಪ್ಪಾಳೆಯನ್ನು ಸ್ವತಃ ತಮಗೆ ತಾವೇ ಸುದೀಪ್ ಕೊಟ್ಟುಕೊಂಡಿದ್ದರು. ನಿಮ್ಮಂತವರನ್ನು ಹೇಗೆಲ್ಲಾ ಸಂಭಾವಳಿಸುತ್ತೇನೆ ಎಂಬ ಕಾರಣಕ್ಕೆ ನನಗೆ ನಾನೇ ಮೊದಲ ಬಾರಿ ಕಿಚ್ಚನ ಚಪ್ಪಾಳೆ ಕೊಟ್ಟುಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದರು.
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಹನುಮಂತು ಮೊದಲ ವಾರವೇ ಬಿಗ್ ಬಾಸ್ ಕೃಪೆಯಿಂದ ಮನೆಯ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದರು. ಎರಡನೇ ವಾರ ನ್ಯಾಯಸಮ್ಮತ ಆಟವಾಡಿ ಎರಡನೇ ಬಾರಿ ಕ್ಯಾಪ್ಟನ್ ಆದ ಹನುಮಂತುಗೆ ಕಿಚ್ಚನ ಚಪ್ಪಾಳೆ ಲಭಿಸಿತು.
ಎದುರಾಳಿಯನ್ನು ಮಣಿಸುವ ರಣತಂತ್ರ ರೂಪಿಸಿದ ಸ್ಪರ್ಧಿಗಳು ನಂತರ ಸ್ಪರ್ಧಿಗಳ ಕುತಂತ್ರದಿಂದ ಎಡವಟ್ಟು ಮಾಡಿಕೊಂಡರು. ಆದರೆ ಹನುಮಂತು ಸಹಜವಾಗಿ ಆಡಿ ಗೆದ್ದು ಮನೆಯ ಕ್ಯಾಪ್ಟನ್ ಆಗಿ ಹೊರಹೊಮ್ಮಿದರು. ಈ ಹಿನ್ನೆಲೆಯಲ್ಲಿ ಕಿಚ್ಚನ ಚಪ್ಪಾಳೆ ನೀಡುತ್ತಿರುವುದಾಗಿ ಸುದೀಪ್ ಶನಿವಾರ ಪ್ರಸಾರಗೊಂಡ ಕಾರ್ಯಕ್ರಮದಲ್ಲಿ ವಿವರಿಸಿದರು.