ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೂನ್ ಎರಡನೇ ವಾರದವರೆಗೂ ಕಾಂಗ್ರೆಸ್ ಪಕ್ಷದಿಂದ 3500 ತೆರಿಗೆ ಬಾಕಿ ವಸೂಲಿಗೆ ಆದಾಯ ತೆರಿಗೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಹೇಳಿಕೆ ನೀಡಿದೆ.
ಸಾಲಿಸಿಟರ್ ಜನರಲ್ ಸೋಮವಾರ ಸುಪ್ರೀಂಕೋರ್ಟ್ ಗೆ ನೀಡಿದ ಮಾಹಿತಿಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದು, ಕಾಂಗ್ರೆಸ್ ಪಕ್ಷದ 3500 ಕೋಟಿ ತೆರಿಗೆ ಪಾವತಿಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿದೆ.
ಕಾಂಗ್ರೆಸ್ ಪಕ್ಷವು 134 ಕೋಟಿ ರೂ. ತೆರಿಗೆ ಪಾವತಿಸಿದೆ. ಆದರೆ ಹೊಸದಾಗಿ 1700 ಕೋಟಿ ತೆರಿಗೆ ಪಾವತಿಸಲು ಸೂಚಿಸಲಾಗಿದೆ. ಆದರೆ ಈ ಸಂಬಂಧ ವಸೂಲಾತಿಗೆ ಜೂನ್ ಎರಡನೇ ವಾರದವರೆಗೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ದೇಶದಲ್ಲಿ ಪ್ರಸ್ತುತ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೂ ತೆರಿಗೆ ವಸೂಲಿಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸಾಲಿಸಿಟರ್ ಜನರಲ್ ಮನವರಿಕೆ ಮಾಡಿಕೊಟ್ಟಿದ್ದಾರೆ.