ಸೇನಾಧಿಕಾರಿ ಮಾಡಿದ ಹಿಂಸೆ ಮತ್ತು ಅವಮಾನ ತಡೆಯದೇ ಉಗ್ರವಾದಿ ಆಗಲು ಬಯಸಿದ್ದೆ. ಆದರೆ ಮತ್ತೊಬ್ಬ ಹಿರಿಯ ಅಧಿಕಾರಿ ಕಾರ್ಯವೈಖರಿಯಿಂದ ದೇಶದ ವ್ಯವಸ್ಥೆಯ ಮೇಲೆ ನಂಬಿಕೆ ಬಂದಿತು ಎಂದು ನ್ಯಾಷನಲ್ ಕಾನ್ಫರೆನ್ಸ್ ಶಾಸಕ ಖಾಸಿರ್ ಜೆಮ್ಶೆಡ್ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಜಮ್ಮು ಕಾಶ್ಮೀರ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಶುಕ್ರವಾರ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ನಾನು ಚಿಕ್ಕವನಾಗಿದ್ದಾಗ ಈ ಘಟನೆ ನಡೆದಿದ್ದು, ಹಿರಿಯ ಅಧಿಕಾರಿಯೊಬ್ಬರು ನನ್ನ ಬಳಿ ಮಾತನಾಡಿ ಕಿರಿಯ ಸೇನಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದರು.
ಲೊಲಾಬ್ ಕ್ಷೇತ್ರದ ಶಾಸಕರಾಗಿರುವ ಖಾಸಿರ್ ಜೆಮ್ಶೆಡ್ ಈ ಘಟನೆಯಿಂದ ಮಾತುಕತೆ ಮೂಲಕ ಎಂತಹ ಸಮಸ್ಯೆ ಬೇಕಾದರೂ ಬಗೆಹರಿಸಬಹುದು ಎಂಬುದು ತಿಳಿಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಾನು ಇನ್ನೂ 10ನೇ ತರಗತಿ ವಿದ್ಯಾರ್ಥಿ ಆಗಿದ್ದೆ. ಆಗ ಭಾರತೀಯ ಸೇನೆ ಕಾರ್ಯಾಚರಣೆ ವೇಳೆ ನನ್ನನ್ನು ಸೇರಿಸಿದಂತೆ 32 ಮಂದಿಯನ್ನು ವಿಚಾರಣೆಗೊಳಪಡಿಸಿತು. ಮಿಸ್ಟರ್ ಲೋನ್ ಎಂಬ ಅಧಿಕಾರಿ ಕಾರ್ಯಾಚರಣೆ ವೇಳೆ ಟೆರರಿಸ್ಟ್ ಗುಂಪಿಗೆ ಸೇರಿದವರನ್ನು ನೋಡಿದೆಯಾ ಎಂದು ಕೇಳಿದ. ಅದಕ್ಕೆ ನಾನು ಹೌದು, ಆಗ ಆತ ನಮ್ಮ ಪ್ರದೇಶದಲ್ಲೇ ಇದ್ದ ಎಂದು ಹೇಳಿದೆ. ಇದಕ್ಕಾಗಿ ಆತ ನನಗೆ ಚೆನ್ನಾಗಿ ಹೊಡೆದ. ನಂತರ ಕಾರ್ಯಾಚರಣೆ ವೇಳೆ ಆತ ಅಲ್ಲಿದ್ದನಾ ಎಂದು ಕೇಳಿದರು. ಆಗ ಇಲ್ಲ ಎಂದು ಹೇಳಿದೆ. ಅದಕ್ಕೆ ಮತ್ತೆ ಆತ ನನ್ನನ್ನು ಥಳಿಸಿದ ಎಂದು ಶಾಸಕ ವಿವರಿಸಿದರು.
ನಂತರ ಹಿರಿಯ ಸೇನಾಧಿಕಾರಿಯೊಬ್ಬರು ನನ್ನ ಬಳಿ ಬಂದು ಮುಂದೆ ನೀನು ಏನಾಗುತ್ತಿಯಾ ಎಂದು ಪ್ರಶ್ನಿಸಿದರು. ಹೊಡೆಸಿಕೊಂಡ ಸಿಟ್ಟಿನಲ್ಲಿದ್ದ ನಾನು ಭಯೋತ್ಪಾದಕ ಆಗುತ್ತೇನೆ ಎಂದು ಹೇಳಿದೆ. ಯಾವ ಕಾರಣಕ್ಕೆ ಎಂದು ಮರು ಪ್ರಶ್ನಿಸಿದರು. ಆಗ ನಾನು ನನಗೆ ಕೊಟ್ಟ ಕಿರುಕುಳ ಹಿಂಸೆಯ ಬಗ್ಗೆ ಹೇಳಿದೆ.
ಕೂಡಲೇ ಅವರು ಕಿರಿಯ ಅಧಿಕಾರಿಯನ್ನು ಸಾರ್ವಜನಿಕವಾಗಿ ಬೈಯ್ದು ಕೆಲಸದಿಂದ ಅಮಾನತು ಮಾಡಿದರು. ಇದರಿಂದ ನನಗೆ ದೇಶದ ವ್ಯವಸ್ಥೆ ಮೇಲೆ ನಂಬಿಕೆ ಬಂದಿತು. ಆದರೆ ನನ್ನ ಜೊತೆ ಬಂಧಿಸಲಾಗಿದ್ದ 32 ಜನರ ಪೈಕಿ 27 ಮಂದಿ ಭಯೋತ್ಪಾದಕ ಸಂಘಟನೆ ಸೇರಿಕೊಂಡರು ಎಂದು ಖಾಸಿರ್ ಜೆಮ್ಶೆಡ್ ವಿವರಿಸಿದರು.