ಬೆಳ್ಳುಳ್ಳಿಗೆ ಚಿನ್ನದ ಬೆಲೆಯಿಂದ ಕಣ್ಣು ಹಾಕಿದ ಖದೀಮರು 60 ಕೆಜಿ ಬೆಳ್ಳುಳ್ಳಿ ಕದ್ದಿರುವ ಘಟನೆ ಚಿಕ್ಕಬಳ್ಳಾಪುರದ ಸಂತೆ ಮಾರುಕಟ್ಟೆಯಲ್ಲಿ ನಡೆದಿದೆ.
ಸಂತೆ ಮಾರುಕಟ್ಟೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಬೆಳ್ಳುಳ್ಳಿ ಕೆಜಿಗೆ 400ರಿಂದ 500 ರೂ.ಗೆ ಏರಿಕೆಯಾಗಿದೆ. ಇದರಿಂದ ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ರೈತರನ್ನೇ ಯಾಮಾರಿಸಿ ಬೆಳ್ಳುಳ್ಳಿ ಕದ್ದಿದ್ದಾರೆ.
ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಖರೀದಿಸುವ ನೆಪದಲ್ಲಿ 19 ಕೆಜಿಯ ಚೀಲಗಳನ್ನು ತೆಗೆದುಕೊಂಡು ಟಾಟಾ ಏಸ್ ಗಾಡಿಗೆ ತುಂಬಿಸಿದರು. ನಂತರ ನಮಗೆ ಈರುಳ್ಳಿ ಕೂಡ ಬೇಕು ಎಂದು ವ್ಯಾಪಾರಿಯನ್ನು ನಂಬಿಸಿದ್ದಾರೆ.
ಇದೇ ವೇಳೆ ಗೊಂದಲ ಸೃಷ್ಟಿಸಿದ ಆರೋಪಿಗಳು ಬೆಳ್ಳುಳ್ಳಿಯನ್ನು ಆಟೋದಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ವ್ಯಾಪಾರಿಗಳು ಟಾಟಾ ಏಸ್ ಚಾಲಕನನ್ನು ಹಿಡಿದುಕೊಂಡು ಗಲಾಟೆ ಮಾಡಿದ್ದಾರೆ.
ಬೆಳ್ಳುಳ್ಳಿ ದರ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಚಾಲಕ ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರೂ ಕೇಳದೇ ಥಳಿಸಲು ಮುಂದಾಗಿದ್ದಾರೆ. ಕೊನೆಗೂ ಚಾಲಕ ಮೂಲಬೆಲೆ ನಿಗದಿ ಮಾಡಿ ಫೋನ್ ಪೇ ಮೂಲಕ ವ್ಯಾಪಾರಿಗೆ ನೀಡಿ ಹೋಗಿದ್ದಾನೆ. ಘಟನೆ ಸಂಬಂಧ ಯಾರೂ ಪೊಲೀಸರಿಗೆ ದೂರು ನೀಡಿಲ್ಲ.