ಬೆಂಗಳೂರಿನಲ್ಲಿ ಪತ್ತೆಯಾಗಿರುವ ಎಚ್ ಎಂವಿಪಿ ವೈರಸ್ ಹಳೆಯ ವೈರಸ್ ಆಗಿದ್ದು, ಅಪಾಯಕಾರಿ ಅಲ್ಲ. ಆದ್ದರಿಂದ ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪತ್ತೆಯಾದ 2 ಎಚ್ ಎಂವಿಪಿ ಪ್ರಕರಣಗಳಲ್ಲಿ ಈಗಾಗಲೇ 3 ತಿಂಗಳ ಮಗು ಡಿಸ್ಚಾರ್ಜ್ ಆಗಿದೆ. 8 ತಿಂಗಳ ಇನ್ನೊಂದು ಮಗು ಇಂದು ಅಥವಾ ನಾಳೆ ಬಿಡುಗಡೆ ಆಗಲಿದೆ ಎಂದರು.
ಎಚ್ ಎಂವಿಪಿ ವೈರಸ್ ಹಳೆಯ ವೈರಸ್ ಆಗಿದ್ದು, ಕೊರೊನಾದಂತೆ ಅಪಾಯಕಾರಿ ಅಲ್ಲ. ಈ ಹಿನ್ನೆಲೆಯಲ್ಲಿ ಲಾಕ್ ಡೌಡ್, ವೈದ್ಯಕೀಯ ತಪಾಸಣೆ, ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮುಂತಾದಗಳ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.
ಪ್ರಸ್ತುತ ಪತ್ತೆಯಾಗಿರುವ ವೈರಸ್ ಅಪಾಯಕಾರಿ ಅಲ್ಲ. ಅಲ್ಲದೇ ಚೀನಾದ ವೈರಸ್ ಕೂಡ ಅಲ್ಲ. ರೋಗ ನಿರೋಧಕ ಕಡಿಮೆ ಇರುವ ಮಕ್ಕಳು ಹಾಗೂ ವೃದ್ಧರಲ್ಲಿ ಸಾಮಾನ್ಯವಾಗಿ ಕಂಡು ಬರುವ ಸೋಂಕು ಇದಾಗಿದೆ. ಒಂದು ವೇಳೆ ಈ ಸೋಂಕು ಅಪಾಯಕಾರಿ ಎಂದು ಕಂಡು ಬಂದರೆ, ಕೇಂದ್ರ ಸರ್ಕಾರ ಸೂಚಿಸಿದರೆ ತಪಾಸಣೆ ಹೆಚ್ಚಿಸಲಾಗುವುದು. ಈಗಾಗಲೇ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ ಎಂದು ಅವರು ವಿವರಿಸಿದರು.