ಡಿಎಂಕೆ ಕಾರ್ಯಕ್ರಮದಲ್ಲಿ ನೀಡಲಾದ ಬಿರಿಯಾನಿ ಸೇವಿಸಿ ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ತಮಿಳುನಾಡಿನಲ್ಲಿ ಶನಿವಾರ ನಡೆದಿದೆ.
ದ್ರಾವಿಡ್ ಮುನ್ನೆತ್ರ ಕಳಗಂ (ಡಿಎಂಕೆ) ಕಾರ್ಯಕರ್ತರು ಶನಿವಾರ ಕಲ್ಲಿಗುಡಿ ಜಿಲ್ಲೆಯ ವಿರುದ್ಧ್ ನಗರದಲ್ಲಿ ಆಯೋಜಿಸಿದ್ದ ಸರ್ಕಾರಿ ಸವಲತ್ತುಗಳನ್ನು ಸಾರ್ವಜನಿಕರಿಗೆ ವಿತರಿಸಲು ಕಾರ್ಯಕ್ರಮ ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಬಿರಿಯಾನಿ ವಿತರಿಸಲಾಗಿದ್ದು, ಬಿರಿಯಾನಿ ಸೇವಿಸಿದ 40 ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
ಬಿರಿಯಾನಿ ಸೇವಿಸುತ್ತಿದ್ದಂತೆ ವಾಂತಿ-ಭೇದಿ ಶುರುವಾಗಿದ್ದು, ಅಸ್ವಸ್ಥಗೊಂಡವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನಾ ಸ್ಥಳಕ್ಕೆ 10ಕ್ಕೂ ಹೆಚ್ಚು ಆಂಬುಲೆನ್ಸ್ ಗಳು ದೌಡಾಯಿಸಿದ್ದವು.
ಹಳಸಿದ ಬಿರಿಯಾನಿ ಸೇವಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ನೀಡಲಾದ ಬಿರಿಯಾನಿಯನ್ನು ಕೆಲವರು ತಮ್ಮ ಮನೆಗಳಿಗೆ ತೆಗೆದುಕೊಂಡಿದ್ದರಿಂದ ದೂರದ ಮನೆಗಳಲ್ಲೂ ಜನರು ಅಸ್ವಸ್ಥಗೊಂಡ ಘಟನೆಗಳು ವರದಿಯಾಗಿವೆ.