ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ರಾಜಿ ಸಂಧಾನ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಬಾರ್ ಮಾಲೀಕರು ನವೆಂಬರ್ 20ರಂದು ಕರೆ ನೀಡಿದ್ದ ಬಾರ್ ಬಂದ್ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಅವರ ನಿವಾಸ ಕೃಷ್ಣಾದಲ್ಲಿ ಮದ್ಯ ಮಾಲೀಕರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಬಾರ್ ಬಂದ್ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಬಾರ್ ಮಾಲೀಕರ ಸಂಘದ ವಿಭಾಗೀಯ ಅಧ್ಯಕ್ಷ ಕರುಣಾಕರ ಹೆಗಡೆ ನೇತೃತ್ವದ ನಿಯೋಗ ಮುಖ್ಯಮಂತ್ರಿ ಭೇಟಿ ಮಾಡಿ ಮಾತುಕತೆ ನಡೆಸಿತು.
ಮದ್ಯ ಮಾರಾಟಗಾರರ ಬೇಡಿಕೆ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ಮದ್ಯಮಾರಾಟಗಾರರಿಗೆ ವ್ಯಾಪಾರ ಹೆಚ್ಚಾಗಿ ಸರ್ಕಾರಕ್ಕೆ ಆದಾಯ ತರುವಂತೆ ಮಾಡಲಾಗುವುದು. ಮದ್ಯ ಮಾರಾಟಗಾರರಿಗೆ ಕಿರುಕುಳ ನೀಡದಂತೆ ಅಬಕಾರಿ ಆಯುಕ್ತರಿಗೆ ಸೂಚನೆ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯಪಾಲರಿಗೆ ನಾವು ದೂರು ಕೊಟ್ಟಿಲ್ಲ. ಈ ಬಗ್ಗೆ ಸುಳ್ಳು ಹಬ್ಬಿಸಿದ್ದಾರೆ. ದೂರು ಕೊಟ್ಟವರಿಗೂ ನಮಗೂ ಸಂಬಂಧವೇ ಇಲ್ಲ. ಈ ಬಗ್ಗೆ ಬೇಕಿದ್ದರೆ ಪರಿಶೀಲನೆ ನಡೆಸಿ, ತನಿಖೆ ನಡೆಸಿ ಎಂದು ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಒಕ್ಕೋರಲಿನಿಂದ ಸ್ಪಷ್ಟಪಡಿಸಿದರು.
ಅಬಕಾರಿ ಇಲಾಖೆ ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿ ಜಾರಿಗೆ ತರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಮದ್ಯ ಮಾರಾಟಗಾರರು ಎದುರಿಸುತ್ತಿರುವ ಸಮಸ್ಯೆಗಳ ವರದಿ ನೀಡಲು ಸೂಚಿಸಲಾಗುವುದು. ಅಲ್ಲದೇ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.