ಭಾರತ ತಂಡವನ್ನು 25 ರನ್ ಗಳಿಂದ ಮಣಿಸಿದ ನ್ಯೂಜಿಲೆಂಡ್ ತಂಡ ಭಾರತದ ನೆಲದಲ್ಲಿ ಇದೇ ಮೊದಲ ಬಾರಿ 3-0ಯಿಂದ ಟೆಸ್ಟ್ ಸರಣಿಯನ್ನು ವೈಟ್ ವಾಷ್ ಇತಿಹಾಸ ನಿರ್ಮಿಸಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 147 ರನ್ ಗುರಿ ಬೆಂಬತ್ತಿದ ಭಾರತ ತಂಡ ಎರಡನೇ ಇನಿಂಗ್ಸ್ ನಲ್ಲಿ 121 ರನ್ ಗೆ ಆಲೌಟಾಯಿತು.
ಭಾರತ ತಂಡ ಇದೇ ಮೊದಲ ಬಾರಿ ತವರಿನಲ್ಲಿ 0-3ರಿಂದ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿದೆ. 1999-2000ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 0-2ರಿಂದ ಸೋಲುಂಡಿತ್ತು. ಆದರೆ ಇದೀಗ ಮೊದಲ ಬಾರಿ ಸತತ ಮೂರು ಪಂದ್ಯಗಳಲ್ಲಿ ಮುಗ್ಗರಿಸಿದೆ. ಆಘಾತಕಾರಿ ವಿಷಯ ಅಂದರೆ ಭಾರತತ ತಂಡ 6 ಇನಿಂಗ್ಸ್ ಗಳಲ್ಲಿ 200 ರನ್ ಗಡಿ ದಾಟಲು ಕೂಡ ಪರದಾಟ ನಡೆಸಿದೆ.
ಸ್ಪಿನ್ನರ್ ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದ ಭಾರತದ ಆಟಗಾರರು ಇದೇ ಮೊದಲ ಬಾರಿ ಸ್ಪಿನ್ನರ್ ಗಳ ವಿರುದ್ಧ ರನ್ ಗಳಿಸಲು ಮಾತ್ರವಲ್ಲ ವಿಕೆಟ್ ಉಳಿಸಿಕೊಳ್ಳಲು ಪರದಾಡುತ್ತಿರುವುದು ಇಡೀ ಸರಣಿಯಲ್ಲಿ ಸ್ಪಷ್ಟವಾಯಿತು. ಅದರಲ್ಲೂ ರೋಹಿತ್ ಶರ್ಮ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್ ವೈಫಲ್ಯ ತಂಡವನ್ನು ಚಿಂತೆಗೀಡು ಮಾಡಿದೆ. ಗೌತಮ್ ಗಂಭೀರ್ ಕೋಚ್ ಸ್ಥಾನ ಅಲಂಕರಿಸಿದ ನಂತರ ಮೊದಲ ಸರಣಿಯಲ್ಲೇ ಹೀನಾಯ ಸೋಲಿನ ದಾಖಲೆ ಬರೆದಿದೆ.
ಸುಲಭ ಗುರಿ ಬೆಂಬತ್ತಿದ ಭಾರತ ತಂಡ 29 ರನ್ ಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ 6ನೇ ವಿಕೆಟ್ ಗೆ 42 ರನ್ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಿ ಹೋರಾಟ ನಡೆಸಿದರು. ಆದರೆ ಜಡೇಜಾ ಔಟಾಗುತ್ತಿದ್ದಂತೆ ತಂಡ ಮತ್ತೆ ಕುಸಿತ ಅನುಭವಿಸಿತು.
ರಿಷಭ್ ಪಂತ್ 57 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 64 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದ್ದುಯ ಪ್ರಯೋಜನವಾಗಲಿಲ್ಲ. ಸ್ಪಿನ್ನರ್ ಅಜಿಜ್ ಪಟೇಲ್ 11 ವಿಕೆಟ್ ಪಡೆದು ಭಾರತ ಬ್ಯಾಟಿಂಗ್ ಬೆನ್ನೆಲುಬು ಮುರಿದರು.