ಬಹುಭಾಷಾ ನಟ ಪ್ರಭಾಸ್ 3 ಚಿತ್ರಗಳಿಗೆ ಏಕಕಾಲದಲ್ಲಿ ಹೊಂಬಾಳೆ ಫಿಲಂಸ್ ಜೊತೆ ಒಪ್ಪಂಡ ಮಾಡಿಕೊಂಡಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಿದ ದಾಖಲೆ ಬರೆದಿದ್ದಾರೆ.
ಹೋಂಬಾಳೆ ಫಿಲಂಸ್ ಸಿನಿಮಾ ನಿರ್ಮಾಣ ಸಂಸ್ಥೆ ಜೊತೆ ಈಗಾಗಲೇ ಸಲಾರ್ ಚಿತ್ರದಲ್ಲಿ ನಟಿಸಿರುವ ಪ್ರಭಾಸ್ ಸಲಾರ್-2 ಅಲ್ಲದೇ ಮತ್ತೆರಡು ಹೊಸ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಒಂದು ಚಿತ್ರಕ್ಕೆ ಸುಮಾರು 150 ಕೋಟಿ ರೂ.ನಂತೆ 575 ಕೋಟಿ ರೂ.ಸಂಭಾವನೆ ಪಡೆಯಲಿದ್ದಾರೆ. ಈ ಮೂಲಕ ಇಷ್ಟು ದೊಡ್ಡ ಮೊತ್ತದ ಒಪ್ಪಂದ ಮಾಡಿಕೊಂಡ ಮೊದಲ ನಟ ಎಂಬ ಗೌರವಕ್ಕೆ ಪ್ರಭಾಸ್ ಪಾತ್ರರಾಗಿದ್ದಾರೆ.
ಸಲಾರ್ ಚಿತ್ರ ನಿರ್ದೇಶಿಸಿದ್ದ ಪ್ರಶಾಂತ್ ನೀಲ್ ಸಲಾರ್-2 ಚಿತ್ರವನ್ನೂ ನಿರ್ದೇಶಿಸಲಿದ್ದಾರೆ. ನಂತರ ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಮೂರು ಚಿತ್ರಗಳನ್ನು ಹೋಂಬಾಳೆ ಫಿಲಂಸ್ ನಿರ್ಮಿಸುತ್ತಿದ್ದು, ಚಿತ್ರದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ದಕ್ಷಿಣ ಭಾರತದ ಭಾಷೆಯ ಚಿತ್ರದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಉದಯಿಸಿರುವ ಪ್ರಭಾಸ್ ಈಗಾಗಲೇ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದು, ಮೂರು ಚಿತ್ರಗಳು ಈಗಾಗಲೇ ಬಿಡುಗಡೆಗೆ ಸಿದ್ಧವಾಗಿವೆ. ರಾಜಾಸಾಬ್, ಫೌಜಿ ಸಿದ್ದವಾಗಿದ್ದು, ಅನಿಮಲ್ ಚಿತ್ರದ ಖ್ಯಾತಿಯ ಸಂದೀಪ್ ರೆಡ್ಡಿ ವಾಂಗಾ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಬಾಹುಬಲಿ ಚಿತ್ರದ ನಂತರ ಪ್ರಭಾಸ್ ನಟಿಸಿದ ಎರಡು ಚಿತ್ರಗಳು ಸತತ ಸೋಲುಂಡಿದ್ದವು. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಪ್ರಶಾಂತ್ ನೀಲ್ ನಿರ್ದೇಶಿಸಿದ್ದ ಸಲಾರ್ ಚಿತ್ರ ಸೂಪರ್ ಹಿಟ್ ಆಗಿತ್ತು. ಇದರ ಬೆನ್ನಲ್ಲೇ ಬಿಡುಗಡೆ ಆದ ಕಲ್ಕಿ 2898 ಎಡಿ ಚಿತ್ರ ಕೂಡ ಹಿಟ್ ಆಗಿದ್ದು, ಇದರ ಎರಡನೇ ಭಾಗದಲ್ಲೂ ನಟಿಸಿದ್ದಾರೆ.