ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಇಯಾನ್ ಬಾಥಮ್ ಮೀನು ಹಿಡಿಯಲು ಸಾಗುತ್ತಿದ್ದ ದೋಣಿ ಮಗುಚಿ ಬಿದ್ದಿದ್ದರಿಂದ ಮೊಸಳೆ ಹಾಗೂ ಬುಲ್ ಶಾರ್ಕ್ ಗಳಿದ್ದ ನದಿಗೆ ಬಿದ್ದ ಘಟನೆ ಆಸ್ಟ್ರೇಲಿಯಾದಲ್ಲಿ ಸಂಭವಿಸಿದೆ.
ಕ್ರಿಕೆಟ್ ದಂತಕತೆ 68 ವರ್ಷದ ಇಯಾನ್ ಬಾಥಮ್ ಸ್ನೇಹಿತ ಹಾಗೂ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮರ್ಚ್ ಹ್ಯೂಸ್ ಜೊತೆ ಉತ್ತರ ಆಸ್ಟ್ರೇಲಿಯಾದಲ್ಲಿ ನಾಲ್ಕು ದಿನಗಳ ಫಿಶಿಂಗ್ ಪ್ರವಾಸ ಕೈಗೊಂಡಿದ್ದಾಗ ಈ ದುರ್ಘಟನೆ ನಡೆದಿದ್ದು, ಮೊಸಳೆ ಹಾಗೂ ಬುಲ್ ಫಿಶ್ ದಾಳಿಯಿಂದ ರಕ್ಷಿಸಲಾಗಿದೆ.
ದೋಣಿಯಲ್ಲಿ ಸಾಗುತ್ತಿದ್ದಾಗ ಹಗ್ಗ ತುಂಡಾಗಿ ಭಾಥಮ್ ನದಿಗೆ ಬಿದ್ದಿದ್ದಾರೆ. ನದಿಯಲ್ಲಿ ಭಾರೀ ಸಂಖ್ಯೆಯ ಮೊಸಳೆ ಹಾಗೂ ಬುಲ್ ಶಾರ್ಕ್ ಗಳು ತುಂಬಿದ್ದರಿಂದ ಜೊತೆಗಿದ್ದವರು ಆತಂಕಗೊಂಡಿದ್ದರು. ಆದರೆ ಕೂಡಲೇ ಅವರನ್ನು ನದಿಯಿಂದ ಮೇಲಕ್ಕೆ ಎತ್ತುವ ಮೂಲಕ ರಕ್ಷಿಸಲಾಗಿದೆ.
ಹಗ್ಗ ತುಂಡಾಗಿ ನದಿಗೆ ಬಿದ್ದ ಬಾಥಮ್ ಕೂಡಲೇ ಹಗ್ಗವನ್ನು ಹಿಡಿದುಕೊಂಡಿದ್ದರಿಂದ ದೋಣಿ ಜೊತೆಯಲ್ಲಿ ಇರುವಂತಾಯಿತು. ಇದರಿಂದ ಅವರನ್ನು ಕೂಡಲೇ ರಕ್ಷಿಸಲು ಸಿಬ್ಬಂದಿಗೆ ಸಹಾಯವಾಯಿತು. ಘಟನೆಯಲ್ಲಿ ಬಾಥಮ್ ಅವರ ದೇಹದ ಹಲವು ಕಡೆ ತರಚಿದಂತೆ ಗಾಯಗಳಾಗಿವೆ.
ಇಯಾನ್ ಭಾಥಮ್ ಮತ್ತು ಸ್ನೇಹಿತರು ಆಸ್ಟ್ರೇಲಿಯಾದ ಬಾರಮುಂಡಿ ಬಳಿಯ ಮೊಯ್ಲೆ ನದಿಯಲ್ಲಿ ಫಿಶಿಂಗ್ ಪ್ರವಾಸ ಹಮ್ಮಿಕೊಂಡಿದ್ದರು. ನಾನು ನದಿಗೆ ಬಿದ್ದ ಕೂಡಲೇ ನನ್ನೊಂದಿಗೆ ಇದ್ದವರು ಹಿಂದೆ ಮುಂದೆ ಯೋಚಿಸಿದೆ ನದಿಗೆ ಹಾರಿ ನನ್ನನ್ನು ರಕ್ಷಿಸಿದರು. ನದಿಗೆ ಬಿದ್ದಾಗ ಅಲ್ಲಿ ಏನೇನಿವೆ ಎಂಬ ಯೋಚನೆ ಕೂಡ ಮಾಡಲು ಆಗಿರಲಿಲ್ಲ ಎಂದು ಬಾಥಮ್ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೇ ನದಿಗೆ ಹಾರಿ ರಕ್ಷಿಸಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇಯಾನ್ ಬಾಥಮ್ ಇಂಗ್ಲೆಂಡ್ ತಂಡದ ಪ್ರಮುಖ ಆಲ್ ರೌಂಡರ್ ಆಗಿದ್ದು, ಕಪಿಲ್ ದೇವ್, ರಿಚರ್ಡ್ಸ್ ಹ್ಯಾಡ್ಲಿ ಅವರಂಥಹ ಸಮಕಾಲಿನ ಜೊತೆ ಆಡಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ 383 ವಿಕೆಟ್ ಮತ್ತು 5000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.