ಆರಂಭಿಕ ಸಂಜು ಸ್ಯಾಮ್ಸನ್ ಶತಕ ಹಾಗೂ ಸ್ಪಿನ್ನರ್ ಗಳ ಮಾರಕ ದಾಳಿ ನೆರವಿನಿಂದ ಭಾರತ ತಂಡ 61 ರನ್ ಗಳ ಭಾರೀ ಅಂತರದಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಡರ್ಬನ್ ನಲ್ಲಿ ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 202 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ ತಂಡ 17.5 ಓವರ್ ಗಳಲ್ಲಿ 141 ರನ್ ಗೆ ಆಲೌಟಾಯಿತು.
ಪೈಪೋಟಿಯ ಮೊತ್ತ ಬೆಂಬತ್ತಿದ ದಕ್ಷಿಣ ಆಫ್ರಿಕಾ ತಂಡ ಸ್ಪಿನ್ನರ್ ವರುಣ್ ಚಕ್ರವರ್ತಿ ದಾಳಿಗೆ ತತ್ತರಿಸಿ ಆರಂಭಿಕ ಆಘಾತಕ್ಕೆ ಒಳಗಾಯಿತು. ಒಂದು ಹಂತದಲ್ಲಿ ತಂಡ 44 ರನ್ ಗೆ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದಾಗ ಐಪಿಎಲ್ ನಲ್ಲಿ ಅತೀ ದೊಡ್ಡ ಮೊತ್ತ (23 ಕೋಟಿ ರೂ.ಗೆ) ತಂಡದಲ್ಲಿ ಉಳಿದ ದಾಖಲೆ ಬರೆದ ಹೆನ್ರಿಚ್ ಕ್ಲಾಸೆನ್ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 25 ರನ್ ಬಾರಿಸಿ ಹೋರಾಟ ನಡೆಸಿದರು.
ಹೆನ್ರಿಚ್ ಔಟಾಗುತ್ತಿದ್ದಂತೆ ತಂಡ ರವಿ ಬಿಶ್ನೋಯಿ ದಾಳಿಗೆ ಸಿಲುಕಿ ಮತ್ತೊಮ್ಮೆ ಕುಸಿತ ಕಂಡಿತು. ಇದರಿಂದ ತಂಡ 114 ರನ್ ಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು. ಈ ಹಂತದಲ್ಲಿ ಗೆರಾಲ್ಡ್ ಕೊಯೆಟಿಜ್ 11 ಎಸೆತಗಳಲ್ಲಿ 3 ಸಿಕ್ಸರ್ ಒಳಗೊಂಡ 23 ರನ್ ಬಾರಿಸಿದ್ದಾಗ ಸೂರ್ಯಕುಮಾರ್ ಯಾದವ್ ಮಿಂಚಿನ ಕ್ಷೇತ್ರರಕ್ಷಣೆ ಹಾಗೂ ನೇರ ಎಸೆತದಿಂದ ರನೌಟ್ ಆದರು.
ಸ್ಯಾಮ್ಸನ್ ಸತತ 2ನೇ ಶತಕ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಟಿ-20ಯಲ್ಲಿ ಸಂಜು ಸ್ಯಾಮ್ಸನ್ ಸಿಡಿಸಿದ ಸತತ 2ನೇ ಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು.
47 ಎಸೆತಗಳಲ್ಲಿ ಶತಕ ಪೂರೈಸಿದ ಸ್ಯಾಮ್ಸನ್ 50 ಎಸೆತಗಳಲ್ಲಿ 7 ಬೌಂಡರಿ ಮತ್ತು 10 ಸಿಕ್ಸರ್ ಗಳ ನೆರವಿನಿಂದ 107 ರ್ ಬಾರಿಸಿ ಔಟಾದರು. ತವರಿನಲ್ಲಿ ನಡೆದ ನ್ಯೂಜಿಲೆಂಡ್ ಸರಣಿಯಲ್ಲಿ ಶತಕ ಸಿಡಿಸಿದ್ದ ಸ್ಯಾಮ್ಸನ್ ಗೆ ಇದು ಎರಡನೇ ಶತಕವಾಗಿದೆ.
ತಿಲಕ್ ವರ್ಮಾ (33), ಸೂರ್ಯಕುಮಾರ್ ಯಾದವ್ (21) ಮತ್ತು ರಿಂಕು ಸಿಂಗ್ (11) ತಂಡದ ಮೊತ್ತ 200ರ ಗಡಿ ತಲುಪಿಸಲು ನೆರವಾದರು. ದಕ್ಷಿಣ ಆಫ್ರಿಕಾ ಪರ ಗೆರಾಲ್ಡ್ ಕೊಯಿಟೆಜ್ 3 ವಿಕೆಟ್ ಪಡೆದು ಮಿಂಚಿದರು.