Saturday, November 16, 2024
Google search engine
Homeತಾಜಾ ಸುದ್ದಿಗ್ಯಾರಂಟಿ ಜಾರಿ ಮಾಡಿಲ್ಲ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಣೆ: ಪ್ರಧಾನಿಗೆ ಸಿದ್ದರಾಮಯ್ಯ ಸವಾಲು

ಗ್ಯಾರಂಟಿ ಜಾರಿ ಮಾಡಿಲ್ಲ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಣೆ: ಪ್ರಧಾನಿಗೆ ಸಿದ್ದರಾಮಯ್ಯ ಸವಾಲು

ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ, ಯಶಸ್ವಿಯಾಗಿ ರಾಜ್ಯದ ಜನರ ಮನೆ ಮನೆ ತಲುಪಿದೆ. ಪ್ರಧಾನಿ ಮೋದಿ ಕರ್ನಾಟಕದಲ್ಲಿ ಗ್ಯಾರಂಟಿ ಜಾರಿ ಆಗಿಲ್ಲ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಮಹಾರಾಷ್ಟ್ರದ ನಾನಾ ಕಡೆ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದ ನಂತರ ಸೋಲಾಪುರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಬರ್ತಾರೆ ಹಸಿ ಹಸಿ ಸುಳ್ಳು ಹೇಳಿ ಹೋಗ್ತಾರೆ. ಅವರ ಆರೋಪಗಳಿಗೆ ಯಾವುದೇ ಆಧಾರ ಇರುವುದಿಲ್ಲ ಎಂದರು.

ಕರ್ನಾಟಕದಲ್ಲಿ ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ರಾಜ್ಯದ ಜನರ ಮನೆ ಮನೆ ತಲುಪಿದೆ. ಮಹಾರಾಷ್ಟ್ರ ಬಿಜೆಪಿ ಮುಖಂಡರು ಮತ್ತು ಬಿಜೆಪಿಯ ಮಂತ್ರಿಗಳು ಕರ್ನಾಟಕಕ್ಕೆ ಬಂದು ಪರೀಕ್ಷಿಸಲಿ. ಸುಳ್ಳಾದ್ರೆ ನಾನು ರಾಜಕೀಯ ನಿವೃತ್ತಿ ತಗೊತೀನಿ. ನಿಜ ಆಗಿದ್ರೆ ನೀವು ಮಹಾರಾಷ್ಟ್ರ ಜನತೆಯ ಕ್ಷಮೆ ಕೋರಿ ರಾಜಕೀಯ ನಿವೃತ್ತಿ ಘೋಷಿಸ್ತೀರಾ? ಎಂದು ಸವಾಲು ಹಾಕಿದರು.

ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕೇಸು ದಾಖಲಿಸಲು ನಿರ್ಧರಿಸಿದ್ದೇವೆ. ನಮ್ಮ ಸರ್ಕಾರದ ವಿರುದ್ಧ ಪುಟಗಟ್ಟಲೆ ಸುಳ್ಳು ಜಾಹಿರಾತು ನೀಡಿರುವ ಮಹಾರಾಷ್ಟ್ರ ಬಿಜೆಪಿ ಸರ್ಕಾರದ ವಿರುದ್ಧ ಕೇಸು ದಾಖಲಿಸಲು ನಿರ್ಧರಿಸಿದ್ಸೇವೆ ಎಂದು ಅವರು ಹೇಳಿದರು.

ಕರ್ನಾಟಕ ಪ್ರತೀ ವರ್ಷ 4 ಲಕ್ಷ 50 ಸಾವಿರ ಕೋಟಿಯಷ್ಟು ತೆರಿಗೆಯನ್ನು ಕೇಂದ್ರಕ್ಕೆ ಪಾವತಿಸಿದರೆ ವಾಪಾಸ್ ರಾಜ್ಯಕ್ಕೆ ಬರುತ್ತಿರುವುದು 60 ಸಾವಿರ ಕೋಟಿ ರೂಪಾಯಿ ಮಾತ್ರ. ಮಹಾರಾಷ್ಟ್ರ ರಾಜ್ಯ ಪ್ರತೀ ವರ್ಷ 8 ಲಕ್ಷ 78 ಸಾವಿರ ಕೋಟಿ ರೂಪಾಯಿ ತೆರಿಗೆ ಕಟ್ಟಿದರೆ ವಾಪಾಸ್ ಬರುತ್ತಿರುವುದು 1 ಲಕ್ಷ 30 ಸಾವಿರ ಕೋಟಿ ಮಾತ್ರ. ಹೀಗಾಗಿ ಮಹಾರಾಷ್ಟ್ರ ಕಟ್ಟುವ ಪ್ರತೀ  ಒಂದು ರೂಪಾಯಿ ತೆರಿಗೆಯಲ್ಲಿ 15 ಪೈಸೆಯಷ್ಟನ್ನು, ಕರ್ನಾಟಕ 13 ಪೈಸೆಯಷ್ಟನ್ನು ಮಾತ್ರ ವಾಪಾಸ್ ಪಡೆಯುತ್ತಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಕೇಂದ್ರದ ಮೋದಿ ಸರ್ಕಾರ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಿಗೂ ಅನ್ಯಾಯ ಮಾಡುತ್ತಿದೆ. ಗ್ಯಾರಂಟಿಗಳ ಜಾರಿಯಿಂದ  ಆರ್ಥಿಕತೆ ನಾಶವಾಗುತ್ತದೆ ಎಂದು ಮೋದಿ ಭಾಷಣ ಮಾಡಿದ್ದಾರೆ. ಆದರೆ, ಇದೇ ಬಿಜೆಪಿ ಮಹಾರಾಷ್ಟ್ರ ಚುನಾವಣೆಯಲ್ಲೂ ಗ್ಯಾರಂಟಿಗಳನ್ನು ಘೋಷಿಸಿದೆ. ಮಧ್ಯಪ್ರದೇಶ ಚುನಾವಣೆಯಲ್ಲೂ ಗ್ಯಾರಂಟಿಗಳನ್ನು ಘೋಷಿಸಿತ್ತು.  ಮೋದಿ ಯಾಕೆ ಈ ಮಟ್ಟದ ಸುಳ್ಳು ಹೇಳುತ್ತಾರೆ? ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರೂ ನಮ್ಮ ಗ್ಯಾರಂಟಿಗಳ ಅನುಕೂಲ ಪಡೆಯುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಸಾಮಾಜಿಕವಾಗಿ, ಆರ್ಥಿಕವಾಗಿ ದೊಡ್ಡ ರಾಜ್ಯ. ಆದ್ದರಿಂದ ಇಲ್ಲಿ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಆಘಾಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಎಲ್ಲಾ  ಗ್ಯಾರಂಟಿಗಳನ್ನು ಜಾರಿ ಮಾಡುತ್ತಾರೆ. ಅನುಮಾನ ಬೇಡ ಎಂದು ಸಿದ್ದರಾಮಯ್ಯ ನುಡಿದರು.

ಮೋದಿ ಸರ್ಕಾರ ರೈತರ ಒಂದು ರೂಪಾಯಿ ಸಾಲವನ್ನೂ ಮನ್ನಾ ಮಾಡಲಿಲ್ಲ. ಶ್ರೀಮಂತ ಉದ್ಯಮಿಗಳ 16 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮಾತ್ರ ಮನ್ನಾ ಮಾಡಿದೆ. ಆದ್ದರಿಂದ ಬಿಜೆಪಿ ಮತ್ತು ಮೋದಿ ಕೇವಲ ಅತ್ಯಂತ ಶ್ರೀಮಂತರ ಪರವಾಗಿದೆ ಎನ್ನುವುದು ಸಾಬೀತಾಗಿದೆ. ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೇನೆ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆದಾಗ ಭಾರತದ ರೈತರ 76 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದರು ಎಂದು ಹೇಳಿದರು.

ಶಕ್ತಿ ಯೋಜನೆ: ಇಲ್ಲಿಯವರೆಗೂ ಈ ಗ್ಯಾರಂಟಿಯಿಂದ 325 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ

ಗೃಹಜ್ಯೋತಿ : ಒಂದು ಕೋಟಿ 62 ಸಾವಿರ  ಕುಟುಂಬಗಳು 200 ಯೂನಿಟ್ ವರೆಗೆ  ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ

ಅನ್ನಭಾಗ್ಯ : ಒಂದು ಕೋಟಿ 20 ಸಾವಿರ ಕುಟುಂಬಗಳು ಐದು ಕೆಜಿ ಉಚಿತ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಬಾಬ್ತು 170 ರೂಪಾಯಿಗಳನ್ನು ತಲಾ ಪಡೆಯುತ್ತಿದ್ದಾರೆ*

ಗೃಹಲಕ್ಷ್ಮಿ: ಒಂದು ಕೋಟಿ 22 ಲಕ್ಷ ಕುಟುಂಬಗಳ ಯಜಮಾನಿಯರು ಪ್ರತಿ ತಿಂಗಳು 2000 ರೂಪಾಯಿ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದಾರೆ. ಹೆಚ್ಚೂ ಕಡಿಮೆ ಈ ಗ್ಯಾರಂಟಿಯಿಂದ ಪ್ರತೀ ತಿಂಗಳು 30 ಸಾವಿರ ಕೋಟಿ ರೂಪಾಯಿ ಹಣ ಮನೆ ಯಜಮಾನಿಯರ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ

ಯುವನಿಧಿ: ಸರ್ಕಾರ ಬಂದ 8 ತಿಂಗಳೊಳಗೆ ಇದೂ ಸೇರಿ ಎಲ್ಲಾ ಐದು ಗ್ಯಾರಂಟಿಗಳು ಆರಂಭವಾಗಿದ್ದು ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲಮೋ ಹೊಂದಿರುವವರು ಯುವನಿಧಿ ಅಡಿಯಲ್ಲಿ ಭತ್ಯೆ ಪಡೆಯುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments