Wednesday, July 3, 2024
Google search engine
Homeತಾಜಾ ಸುದ್ದಿದೆಹಲಿಯಲ್ಲಿ ಸಿದ್ದರಾಮಯ್ಯ ಕಾಟಾಚಾರದ ಸಭೆ: ಅಶೋಕ್ ಲೇವಡಿ

ದೆಹಲಿಯಲ್ಲಿ ಸಿದ್ದರಾಮಯ್ಯ ಕಾಟಾಚಾರದ ಸಭೆ: ಅಶೋಕ್ ಲೇವಡಿ

ಕೇಂದ್ರ ಸರ್ಕಾರದೊಂದಿಗೆ ಯಾವಾಗಲೂ ಸಂಘರ್ಷ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಸಂಸದರೊಂದಿಗೆ ಕಾಟಾಚಾರದ ಸಭೆ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದರೊಂದಿಗೆ ಕಾಟಾಚಾರದ ಸಭೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿ ದಿನ ಟೀಕಿಸಿ ಈಗ ಸಭೆ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಯಾವಾಗಲೂ ಸೌಹಾರ್ದತೆ ಇರಬೇಕು. ಅಧಿಕಾರ ಇಂದು ಬರುತ್ತದೆ, ಮುಂದೆ ಹೋಗುತ್ತದೆ. ಹೀಗೆ ಸಂಘರ್ಷ ಮಾಡಿಕೊಳ್ಳಲು ಇದು ಭಾರತ-ಪಾಕಿಸ್ತಾನ ಅಲ್ಲ ಎಂದು ಅಶೋಕ ಹೇಳಿದರು.

ಕರ್ನಾಟಕದಲ್ಲಿ ಯಾವುದೇ ಪಕ್ಷ ದೀರ್ಘವಾಗಿ ಆಡಳಿತ ನಡೆಸಿಲ್ಲ. ಇದು ಬದಲಾಗುತ್ತಲೇ ಇರುತ್ತದೆ. ಕೇಂದ್ರ ಸರ್ಕಾರ ನೀಡಿರುವ ಹಣವನ್ನೇ ಖರ್ಚು ಮಾಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಜನರು ಬೆಲೆ ಏರಿಕೆಗಳಿಗೆ ತಯಾರಾಗಿರಬೇಕು. ಈ ಭ್ರಷ್ಟ, ದುಷ್ಟ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡಿಯೇ ಒಬ್ಬ ಸಚಿವರನ್ನು ಬೀಳಿಸಿದ್ದೇವೆ. ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಬೀಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪೆಟ್ರೋಲ್‌ ದರ ಏರಿಕೆ, ಹಾಲಿನ ದರ ಏರಿಕೆ, ಸ್ಟಾಂಪ್‌ ಡ್ಯೂಟಿ, ಹೀಗೆ ಎಲ್ಲ ದರ ಏರಿಕೆಗೂ ಕಾಂಗ್ರೆಸ್‌ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಬಡವರು ಕುಡಿಯುವ ಮದ್ಯದ ದರ ಏರಿಸಿ, ಶ್ರೀಮಂತರ ಮದ್ಯಗಳ ದರ ಇಳಿಕೆ ಮಾಡಿದ್ದಾರೆ. ಇದೇ ಸರ್ಕಾರ ಇನ್ನೂ ಅಧಿಕಾರದಲ್ಲಿ ಇದ್ದರೆ ಕರ್ನಾಟಕದ ಹಣ ಕೊಳ್ಳೆ ಹೊಡೆದು ದೆಹಲಿಗೆ ತೆಗೆದುಕೊಂಡು ಹೋಗುತ್ತದೆ. ಇವರೆಲ್ಲರೂ ಆಲಿಬಾಬ ಮತ್ತು ನಲ್ವತ್ತು ಕಳ್ಳರು ಎಂದರು.

ಈಗ ಹಾಲು ದರ ಏರಿಕೆಯಿಂದ ಹಾಲಾಹಲ ಆಗಿದೆ. ದೇಶಕ್ಕೆ ಅರ್ಥಶಾಸ್ತ್ರದ ಪಾಠ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು 50 ಮಿಲಿ ಲೀಟರ್‌ ಹಾಲು ಕಡಿಮೆ ನೀಡಿ ಎರಡು ರೂಪಾಯಿ ಕಡಿಮೆ ಮಾಡಲಿ. ಹಾಲು ಜಾಸ್ತಿ ಕೊಡಿ ಎಂದು ಮುಖ್ಯಮಂತ್ರಿಗಳ ಬಳಿ ಯಾರೂ ಅರ್ಜಿ ಕೊಟ್ಟಿಲ್ಲ. ಮಳೆಗಾಲ ಬಂದಾಗ ಮೇವು ಹೆಚ್ಚಾಗಿ ಹಾಲು ಹೆಚ್ಚಳವಾಗುವುದು ಸಹಜ. ಅದನ್ನು ಪುಡಿ ಮಾಡುವುದು, ಅಂಗನವಾಡಿಗೆ ಕೊಡುವುದು, ರಫ್ತು ಮಾಡುವುದು ಮೊದಲಾದ ಕ್ರಮಗಳನ್ನು ಸರ್ಕಾರ ಅನುಸರಿಸಬೇಕಿತ್ತು. ಮುಖ್ಯಮಂತ್ರಿಗೆ ಸಹಾಯ ಮಾಡುವ ಬುದ್ಧಿ ಇಲ್ಲ, ಆದರೆ ದುಡ್ಡು ಹೊಡೆಯುವ ಬುದ್ಧಿ ಇದೆ. ಜನರು ಸರ್ಕಾರಕ್ಕೆ ಕಪಾಳಕ್ಕೆ ಬಾರಿಸಬೇಕಿದೆ. 15 ಬಜೆಟ್‌ ಮಂಡಿಸಿದ ಸಿದ್ದರಾಮಯ್ಯನವರ ಅರ್ಥಶಾಸ್ತ್ರ ಇದೇ ಎಂದು ಟೀಕಿಸಿದರು.

ನಾಡಪ್ರಭು ಕೆಂಪೇಗೌಡರು ಯಾರೋ ಒಬ್ಬರ ಸ್ವತ್ತಲ್ಲ. ಅವರು ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದ್ದರು. ಆದರೆ ಕಾಂಗ್ರೆಸ್‌ ಕೆಂಪೇಗೌಡರ ಸಮುದಾಯವನ್ನೇ ಒಂದಾಗಿರಲು ಬಿಡುತ್ತಿಲ್ಲ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕರು. ಕೆಂಪೇಗೌಡ ಜಯಂತಿಗೆ ಅವರನ್ನು ಗೌರವದಿಂದ ಆಹ್ವಾನಿಸಬೇಕಿತ್ತು. ಈ ಜಯಂತಿ ರಾಜಕೀಯಕ್ಕೆ ವೇದಿಕೆಯಾಗಬಾರದು. ಇದು ಕಾಂಗ್ರೆಸ್‌ ಸರ್ಕಾರದ ದ್ವೇಷದ ರಾಜಕಾರಣವಾಗಿದೆ. ಈ ಜಯಂತಿ ಆಚರಣೆಯನ್ನು ಜನರ ದುಡ್ಡಿನಿಂದ ಮಾಡಲಾಗುತ್ತಿದೆ. ಇಂತಹ ಕಾರ್ಯಕ್ರಮಕ್ಕೆ ಸಮುದಾಯದ ಎಲ್ಲ ಹಿರಿಯರನ್ನು ಆಹ್ವಾನಿಸಬೇಕು ಎಂದರು.

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರ್.ಅಶೋಕ, ಶಾಲಾ ಪಠ್ಯಗಳಲ್ಲಿ ಹೆಚ್ಚಾಗಿ ಕೆಂಪೇಗೌಡರ ಚರಿತ್ರೆ ದಾಖಲಾದರೆ ಮಕ್ಕಳಿಗೆ ಹೆಚ್ಚು ಮಾಹಿತಿ ದೊರೆಯುತ್ತದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments