ಅಪರಾಧಿ ಆಗಿರಲಿ, ಆರೋಪಿಯೇ ಆಗಿರಲಿ ಅವರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸುವಂತಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್ ಬುಲ್ಡೋಜರ್ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ವಿಭಾಗೀಯ ಪೀಠ, ನ್ಯಾಯಾಲಯ ಸೂಚನೆ ಮೇರೆಗೂ ಬುಲ್ಡೋಜರ್ ಕಾರ್ಯಾಚರಣೆ ನಡೆಸುವುದು ನ್ಯಾಯಾಂಗ ನಿಂದನೆ ಆಗಲಿದೆ. ಇದಕ್ಕೆ ಅಧಿಕಾರಿಗಳೇ ಜವಾಬ್ದಾರಿ ಆಗುತ್ತಾರೆ ಎಂದು ಖಡಕ್ ಸೂಚನೆ ನೀಡಿದೆ.
ಬುಲ್ಡೋಜರ್ ಕಾರ್ಯಾರಣೆ ಸಂವಿಧಾನ ನಿಯಮಗಳಿಗೆ ವಿರುದ್ಧವಾಗಿದೆ. ಅಕ್ರಮ ಮನೆ ಅಥವಾ ಕಟ್ಟಡಗಳನ್ನು ಮಾತ್ರ ನೆಲಸಮ ಮಾಡಲಾಗುತ್ತಿದೆ ಎಂದು ಕೆಲವು ರಾಜ್ಯ ಸರ್ಕಾರಗಳು ಹೇಳಿವೆ. ಆದರೆ ವಾಸ್ತವವಾಗಿ ಬೇರೆಯದ್ದೇ ಪರಿಸ್ಥಿತಿ ಇದೆ ಎಂದು ಸುಪ್ರೀಂಕೋರ್ಟ್ ಚಾಟಿ ಬೀಸುವ ಮೂಲಕ ಉತ್ತರ ಪ್ರದೇಶ ಸರ್ಕಾರವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದೆ.
ಮನೆ ಕಟ್ಟಿಕೊಳ್ಳುವುದು ಪ್ರತಿಯೊಂದು ಕುಟುಂಬದ ಕನಸಾಗಿರುತ್ತದೆ. ಜನರಿಗೆ ವಾಸ ಮಾಡಲು ಮನೆ ನಿರ್ಮಿಸಿಕೊಳ್ಳಲು ಸರ್ಕಾರದ್ದೇ ಜವಾಬ್ದಾರಿ ಆಗಿರುತ್ತದೆ. ಆದರೆ ಕಟ್ಟಿದ ಮನೆಗಳನ್ನು ಕೆಡವುದು ಸ್ಪಷ್ಟ ಸಂವಿಧಾನ ವಿರೋಧಿಯಾಗಿದೆ. ಆರೋಪಿಯ ವಿರುದ್ಧ ಕಾರ್ಯಾಚರಣೆ ಮಾಡಬೇಕಾದರೂ ಕಾನೂನುಬದ್ಧವಾಗಿಯೇ ಮಾಡಬೇಕೆ ಹೊರತು ಏಕಾಏಕಿ ಬುಲ್ಢೋಜರ್ ಕಾರ್ಯಾಚರಣೆ ನಡೆಸುವುದಲ್ಲ ಎಂದು ನ್ಯಾಯಮೂರ್ತಿ ಗವಾಯಿ ವಿವರಿಸಿದ್ದಾರೆ.