Home ತಾಜಾ ಸುದ್ದಿ ರೈತರಿಗೆ ಸಿಹಿಸುದ್ದಿ: ಕುಸಿಮ್ ಸಿ ಯೋಜನೆ ಡಿಸೆಂಬರ್ ನೊಳಗೆ ಪೂರೈಸಲು ಸಚಿವ ಜಾರ್ಜ್ ಸೂಚನೆ

ರೈತರಿಗೆ ಸಿಹಿಸುದ್ದಿ: ಕುಸಿಮ್ ಸಿ ಯೋಜನೆ ಡಿಸೆಂಬರ್ ನೊಳಗೆ ಪೂರೈಸಲು ಸಚಿವ ಜಾರ್ಜ್ ಸೂಚನೆ

by Editor
0 comments
kj george

ಕುಸುಮ್‌ ಸಿ ಯೋಜನೆಯ ಮೊದಲ ಹಂತದಲ್ಲಿ ಸ್ಥಾಪಿಸುತ್ತಿರುವ ಫೀಡರ್‌ ಮಟ್ಟದ ಸೋಲಾರ್‌ ವಿದ್ಯುತ್‌ ಘಟಕಗಳನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಕುಸುಮ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಅವರು,”ಮುಂದಿನ ವರ್ಷ ಜನವರಿಯಿಂದಲೇ ವಿದ್ಯುತ್‌ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದ್ದು, ಅದಕ್ಕೆ ಪೂರಕವಾಗಿ ಕುಸುಮ್‌ ಸಿ ಅಡಿ ಪ್ರಗತಿಯಲ್ಲಿರುವ ಸೋಲಾರ್‌ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಫೀಡರ್‌ಗಳಿಗೆ ವಿದ್ಯುಚ್ಛಕ್ತಿ ಒದಗಿಸಲು ಕ್ರಮ ಕೈಗೊಳ್ಳಬೇಕು,”ಎಂದು ಸೂಚಿಸಿದರು.

ಕುಸುಮ್‌ ಸಿ ಯೋಜನೆಯಡಿ ಮೊದಲ ಹಂತದ ಅನುಷ್ಠಾನವನ್ನು ತ್ವರಿತಗೊಳಿಸುವ ಜತೆಗೆ, ಎರಡನೇ ಹಂತದ ಯೋಜನೆಗೆ ಟೆಂಡರ್‌ ಪ್ರಕ್ರಿಯೆಯನ್ನ ತ್ವರಿತವಾಗಿ ಆರಂಭಿಸಬೇಕು. ಅಲ್ಲದೇ, ಎಷ್ಟು ಫೀಡರ್‌ಗಳಿಗೆ ಯಾವ ಪ್ರಮಾಣದಲ್ಲಿ ವಿದ್ಯುತ್‌ ಪೂರೈಸಲಾಗುತ್ತದೆ ಎಂಬ ಬಗ್ಗೆ ಕೆಪಿಟಿಸಿಎಲ್‌ಗೆ ಮಾಹಿತಿ ನೀಡಬೇಕು. ಅದರನ್ವಯ, ಅಗತ್ಯಕ್ಕೆ ತಕ್ಕಂತೆ ಸಬ್‌ಸ್ಟೇಷನ್‌ಗಳ ಉನ್ನತೀಕರಣಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ಅವರು ಹೇಳಿದರು.

ಕುಸುಮ್‌ ಬಿ ಯೋಜನೆಯಡಿ ರಾಜ್ಯಕ್ಕೆ 40,000 ಸೋಲಾರ್‌ ಪಂಪ್‌ಸೆಟ್‌ಗಳು ಮಂಜೂರಾಗಿವೆ. ಈ ಗುರಿ ತಲುಪಲು ಫೀಡರ್‌ಗಳಿಂದ 500 ಮೀಟರ್‌ಗೂ ಹೆಚ್ಚು ದೂರವಿರುವ ಅಕ್ರಮ ಪಂಪ್‌ಸೆಟ್‌ಗಳ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ಸೋಲಾರ್‌ ಪಂಪ್‌ಸೆಟ್‌ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಮುಂದಿನ ಹಂತದಲ್ಲಿ ಸೋಲಾರ್‌ ಪಂಪ್‌ಸೆಟ್‌ಗಳಿಗಾಗಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಬೇಕು ಎಂದು ಹೇಳಿದರು.

banner

ಅಕ್ರಮ ಪಂಪ್‌ಸೆಟ್‌ ಹೊಂದಿರುವ 10,151 ಅರ್ಜಿಗಳು ಕುಸುಮ್‌ ಬಿ ಅಡಿ ನೋಂದಣಿಯಾಗಿವೆ. ಅದೇ ರೀತಿ ಹೊಸದಾಗಿ, 27820 ಅರ್ಜಿಗಳು ಬಂದಿದ್ದು, ಒಟ್ಟು 37,971 ಅರ್ಜಿಗಳಿಗೆ ಸಂಬಂಧಿಸಿದಂತೆ ಸೋಲಾರ್‌ ಪಂಪ್‌ ಸೆಟ್‌ಗಳನ್ನು ಕಾಲಮಿತಿಯಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

“ಕೃಷಿ ಪಂಪ್ ಸೆಟ್‌ಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ಕುಸುಮ್ ಬಿ ಮತ್ತು ಕುಸುಮ್ ಸಿ ಯೋಜನೆಗಳು ಪರಿಣಾಮಕಾರಿಯಾಗಿವೆ. ಹೀಗಾಗಿ ಈ ಯೋಜನೆಗಳ ಅನುಷ್ಠಾನ ಕುರಿತು ಆಯಾ ಜಿಲ್ಲಾ ಮಟ್ಟದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ವಿದ್ಯುತ್ ಪೂರೈಕೆ ಸಮಿತಿಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಮಿತಿಯ ಸಲಹೆಗಳನ್ನು ಪಡೆದು ಯೋಜನೆಯನ್ನು ಇನ್ನಷ್ಟು ತ್ವರಿತವಾಗಿ ನಿರ್ವಹಣೆ ಮಾಡಬೇಕು”, ಎಂದು ತಿಳಿಸಿದರು.

ಬೇಸಿಗೆಗೆ ಸಮರ್ಪಕ ವಿದ್ಯುತ್‌ ಪೂರೈಕೆ

ಮುಂದಿನ ಬೇಸಿಗೆಗೆ ಸಮರ್ಪಕ ವಿದ್ಯುತ್‌ ಪೂರೈಕೆ ಸಾಧ್ಯವಾಗುವಂತೆ ಈಗಿನಿಂದಲೇ ಸಿದ್ಧತಾ ಕಾರ್ಯ ಆರಂಭಿಸುವಂತೆ ಎಲ್ಲಾ ಎಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಇಂಧನ ಸಚಿವರು ಸೂಚಿಸಿದರು.

ವಿದ್ಯುತ್ ಪೂರೈಕೆ ಪರಿಸ್ಥಿತಿ ಕುರಿತು ಎಸ್ಕಾಂ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಕಳೆದ ಬೇಸಿಗೆಯಲ್ಲಿ ಬರದ ನಡುವೆಯೂ ವಿದ್ಯುತ್‌ ಬೇಡಿಕೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಮುಂದಿನ ಬೇಸಿಗೆಯಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಸಲು ಅಗತ್ಯ ವಿದ್ಯುತ್‌ ಲಭ್ಯವಿರಲಿದೆ. ಹೀಗಾಗಿ ಅದನ್ನು ಸಮರ್ಪಕವಾಗಿ ಒದಗಿಸಲು ಟ್ರಾನ್ಸ್‌ಫರ್ಮರ್‌ಗಳು, ವಿದ್ಯುತ್‌ ವಿತರಣಾ ಫೀಡರ್‌ಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು,” ಎಂದು ಹೇಳಿದರು.

ದಸರಾ ದೀಪಾಲಂಕಾರಕ್ಕೆ ಮೆಚ್ಚುಗೆ

ಈ ಬಾರಿಯ ದಸರಾ ದೀಪಾಲಂಕಾರ ಮತ್ತು ಡ್ರೋನ್‌ ಶೋ ಕುರಿತಂತೆ ಸೆಸ್ಕ್‌ ಕಾರ್ಯವೈಖರಿಯನ್ನು ಶ್ಲಾಘಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್‌, ಹಿಂದೆಂದಿಗಿಂತಲೂ ಈ ಬಾರಿಯ ದಸರಾ ದೀಪಾಲಂಕಾರ ಹೆಚ್ಚು ಆಕರ್ಷಣೀಯವಾಗಿತ್ತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಈ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೀಪಾಲಂಕಾರ ಯಶಸ್ಸಿಗೆ ದುಡಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಅಭಿನಂದಾರ್ಹರು ಎಂದರು.

ಸಭೆಯಲ್ಲಿ ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್‌ಗುಪ್ತ, ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಇದ್ದರು ಹಾಗೂ ಎಲ್ಲಾ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಆನ್‌ಲೈನ್‌ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕುಸುಮ್‌ ಬಿ

ಕುಸುಮ್ ಬಿ ಯೋಜನೆಯಡಿ, ರೈತರು ತಮ್ಮ ಜಮೀನಿನಲ್ಲಿ  ಸೌರ ಚಾಲಿತ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಈ ಮೂಲಕ ಸಾಂಪ್ರದಾಯಕ ವಿದ್ಯುತ್‌ ಮೇಲೆ ಅವಲಂಬನೆ ಕಡಿಮೆ ಮಾಡಲಿದೆ.  ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೋಲಾರ್ ಪಂಪ್‌ಗಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ. ರೈತರು ತಮ್ಮ ಆಧಾರ್, ಆರ್‌ಟಿಸಿ ಮತ್ತು ಬ್ಯಾಂಕ್ ವಿವರಗಳೊಂದಿಗೆ ಆನ್‌ಲೈನ್ ಪೋರ್ಟಲ್ https://souramitra.com ಮೂಲಕ ನೋಂದಾಯಿಸಿಕೊಳ್ಳಬಹುದು.

ಕುಸುಮ್‌ ಸಿ

ಕುಸುಮ್ ಸಿ ಯೋಜನೆಯಡಿ ಫೀಡರ್ ಮಟ್ಟದ ಸೌರೀಕರಣ ಮೂಲಕ ರೈತರ ಪಂಪ್‍ಸೆಟ್‍ಗಳಿಗೆ ಸೌರ ಶಕ್ತಿಯಿಂದ ವಿದ್ಯುತ್ ಸರಬರಾಜು ಮಾಡಲಾಗುವುದು. ಪ್ರತ್ಯೇಕ ಸೋಲಾರ್ ಪಂಪ್‌ಗಳ ಬದಲಿಗೆ ಕೃಷಿ ಫೀಡರ್‌ಗಳನ್ನು ಸೌರೀಕರಣಗೊಳಿಸುವ ಯೋಜನೆ ಇದಾಗಿದೆ. ಐಪಿ ಸೆಟ್‌ಗಳಿಗೆ  ಸೌರವಿದ್ಯುತ್‌ ಮೂಲದಿಂದ ವಿದ್ಯುತ್‌ ಪೂರೈಕೆಗೆ  ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆ ಹೆಚ್ಚುವುದರಿಂದ ರೈತರ ಅಗತ್ಯಕ್ಕೆ ತಕ್ಕಂತೆ ಹಗಲು ವೇಳೆ ವಿದ್ಯುತ್ ಪೂರೈಸಲು ಸಾಧ್ಯವಾಗಲಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಮತಿಗೆ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಮನವಿ Netflix ನಯನತಾರಾ-ವಿಘ್ನೇಶ್ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ಧನುಷ್! 28 ಎಸೆತಗಳಲ್ಲಿ ಟಿ-20 ಶತಕ ಸಿಡಿಸಿ ಗೇಲ್, ಪಂತ್ ದಾಖಲೆ ಮುರಿದ ಯುವ ಕ್ರಿಕೆಟಿಗ! Law News ಬೆಂಗಳೂರಿನಲ್ಲಿ ಲಾಕಪ್ ಡೆತ್‌: ನಾಲ್ವರು ಪೊಲೀಸರಿಗೆ 12 ವರ್ಷ ಶಿಕ್ಷೆ! vote power ಸ್ವಾಮೀಜಿಗೆ ಸಂವಿಧಾನ ಗೊತ್ತಿಲ್ಲ: ಸಚಿವ ಎಂ.ಮಹದೇವಪ್ಪ ಅಸಮಾಧಾನ Muda Scam ಸಿಬಿಐನಿಂದ ಮುಡಾ ಹಗರಣದ ತನಿಖೆ: ಶುಕ್ರವಾರ ಹೈಕೋರ್ಟ್ ತೀರ್ಪು ಪ್ರಕಟ UP Accident ನಿದ್ದೆಗೆ ಜಾರಿ ಚಾಲಕ, ಚಿರನಿದ್ರೆಗೆ ಜಾರಿಗೆ 5 ವೈದ್ಯರು! ಐಪಿಎಲ್‌ ಹರಾಜಿನಲ್ಲಿ ಸೇಲಾದ 13 ಕನ್ನಡಿಗರು: ಮಯಾಂಕ್ ಕಡೆಗಣನೆ! Goutam Gambhir ಮೊದಲ ಟೆಸ್ಟ್ ಗೆದ್ದ ಬೆನ್ನಲ್ಲೇ ಭಾರತಕ್ಕೆ ಮರಳಿದ ಗಂಭೀರ್! Pakistan ಇಮ್ರಾನ್ ಖಾನ್ ಬೆಂಬಲಿಗರಿಂದ ಧಂಗೆ: ಕಂಡಲ್ಲಿ ಗುಂಡಿಕ್ಕಲು ಆದೇಶ