ಚೆನ್ನೈ: ಕೇಂದ್ರದ ಸರಕಾರದ ನೀತಿಗಳ ವಿರುದ್ಧ ಸಿಡಿದೆದ್ದಿರುವ ತಮಿಳುನಾಡು ಸರಕಾರವು ರಾಜ್ಯದ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟಿದೆ.
ತಮಿಳುನಾಡು ರಾಜ್ಯದ ಸ್ವಾಯತ್ತತೆ ಕುರಿತು ವರದಿ ನೀಡಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಕಟಿಸಿದ್ದಾರೆ.
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಈ ಉನ್ನತ ಮಟ್ಟದ ಸಮಿತಿಯ ನೇತೃತ್ವ ವಹಿಸಲಿದ್ದಾರೆ.
ರಾಜ್ಯದ ಸ್ವಾಯತ್ತತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧವನ್ನು ಸಮಿತಿಯು ವಿವರವಾಗಿ ಪರಿಶೀಲಿಸಲಿದೆ ಹಾಗೂ ೨೦೨೬ರ ಜನವರಿಯಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ.
ಶಿಫಾರಸುಗಳೊಂದಿಗೆ ಅಂತಿಮ ವರದಿಯನ್ನು ಎರಡು ವರ್ಷಗಳಲ್ಲಿ ಸಲ್ಲಿಸಲಾಗುವುದು ಎಂದು ಸ್ಟಾಲಿನ್ ರಾಜ್ಯ ವಿಧಾನಸಭೆಗೆ ತಿಳಿಸಿದರು.
ಮಾಜಿ ಅಧಿಕಾರಿ ಅಶೋಕ್ ವರ್ಧನ್ ಶೆಟ್ಟಿ ಮತ್ತು ರಾಜ್ಯ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಎಂ.ನಾಗನಾಥನ್ ಸಮಿತಿಯ ಸದಸ್ಯರಾಗಿರುತ್ತಾರೆ.
“ರಾಜ್ಯ ಪಟ್ಟಿಯಿಂದ ಸಮವರ್ತಿ ಪಟ್ಟಿಗೆ ವರ್ಗಾವಣೆಯಾದ ವಿಷಯಗಳನ್ನು ಮರಳಿ ವರ್ಗಾಯಿಸಲು ಸಮಿತಿಯು ಕಾನೂನಿನ ಪ್ರಕಾರ ಅಧ್ಯಯನ ಮಾಡಲಿದೆ” ಎಂದು ಮುಖ್ಯಮಂತ್ರಿ ಹೇಳಿದರು.
ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದೆ. ಅಂದರೆ ಅದನ್ನು ರಾಜ್ಯಗಳು ಮತ್ತು ಕೇಂದ್ರ ನಿರ್ವಹಿಸುತ್ತವೆ. ಆದರೆ ಇದು ಕೇವಲ ರಾಜ್ಯ ವಿಷಯವಾಗಿರಬೇಕು ಎಂದು ಸ್ಟಾಲಿನ್ ಒತ್ತಾಯಿಸಿದ್ದಾರೆ.


