ಪತ್ನಿಯನ್ನು 200 ತುಂಡುಗಳಾಗಿ ಕತ್ತರಿಸಿದ ಪತಿ ಮಾಂಸದ ತುಂಡುಗಳನ್ನು ಕೆಲವು ವಾರಗಳ ಕಾಲ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಆಘಾತಕಾರಿ ಘಟನೆ ಬ್ರಿಟನ್ ನಲ್ಲಿ ನಡೆದಿದೆ.
28 ವರ್ಷದ ನಿಕೊಲಸ್ ಮೆಟ್ಸನ್ ಈ ಕೃತ್ಯ ಎಸಗಿದ್ದು, 26 ವರ್ಷದ ಪತ್ನಿ ಹೋಲಿ ಬ್ರಾಮ್ಲಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.
2023 ಮೇನಲ್ಲಿ ನಡೆದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಒಂದು ವರ್ಷದಿಂದ ನಾನು ಆಕೆಯನ್ನು ಕೊಂದಿಲ್ಲ ಎಂದು ವಾದಿಸುತ್ತಲೇ ಬಂದಿದ್ದ ನಿಕೊಲಸ್ ಶುಕ್ರವಾರ ಪತ್ನಿಯನ್ನು ನಾನೇ ಕೊಂದು 200 ತುಂಡುಗಳಾಗಿ ಕತ್ತರಿಸಿದ್ದೆ. ವಾರಗಳ ಕಾಲ ಫ್ರಿಡ್ಜ್ ನಲ್ಲಿ ಇಟ್ಟಿದ್ದು ನಂತರ ಸ್ನೇಹಿತನ ನೆರವಿನಿಂದ ನದಿಯಲ್ಲಿ ಬಿಸಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ತನಿಖೆ ನಡೆಸುತ್ತಿದ್ದ ಪೊಲೀಸರು ಹಲವು ಬಾರಿ ವಿಚಾರಣೆ ನಡೆಸಿದಾಗ ಆಕೆ ಹಾಸಿಗೆ ಕೆಳಗೆ ಬಚ್ಚಿಟ್ಟುಕೊಂಡಿರಬೇಕು ಎಂದು ಹಾಸ್ಯ ಮಾಡುತ್ತಿದ್ದ.
ವಿಚಾರಣೆ ವೇಳೆ ಆಕೆಯನ್ನು ನಾನು ಬೆಡ್ ರೂಮ್ ನಲ್ಲಿ ಹಲವು ಬಾರಿ ಇರಿದು ಕೊಂದಿದ್ದು, ನಂತರ ಬಾತ್ ರೂಮ್ ನಲ್ಲಿ ಶವ ಹೊತ್ತೊಯ್ದು ತುಂಡುಗಳಾಗಿ ಕತ್ತರಿಸಿದೆ. ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಮಾಂಸದ ತುಂಡುಗಳನ್ನು ಶೇಖರಿಸಿ ಅಡುಗೆ ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ಇರಿಸಿದ್ದೆ ಎಂದು ಪತಿ ವಿವರಿಸಿದ್ದಾನೆ.
ಪೊಲೀಸರು ನಾಪತ್ತೆ ಪ್ರಕರಣದಲ್ಲಿ ವಿಚಾರಣೆಗೆ ಬರುವ ಕೆಲವೇ ದಿನಗಳ ಮುನ್ನ ಸ್ನೇಹಿತನಿಗೆ 50 ಪೌಂಡ್ ನೀಡಿ ಶವವನ್ನು ಸಾಗಿಸಿದ್ದ. ನಂತರ ಅದನ್ನು ನದಿಯಲ್ಲಿ ಬಿಸಾಡಿದ್ದ. ಒಂದು ಬ್ಯಾಗ್ ನಲ್ಲಿ ಕೈ-ಕಾಲುಗಳು ಹಾಗೂ ಮತ್ತೊಂದರಲ್ಲಿ ಬೋಳಿಸಿದ ತಲೆ ಇರಿಸಿ ವಾಕಿಂಗ್ ನೆಪದಲ್ಲಿ ಬಂದು ಬಿಸಾಡಿದ್ದ ಎಂದು ತಿಳಿದು ಬಂದಿದೆ.
ಪತ್ನಿ ನಾಪತ್ತೆ ಅಥವಾ ಕೊಲೆ ಬಗ್ಗೆ ಪ್ರಶ್ನಿಸಿದರೆ ಆಕೆಯನ್ನು ಕೊಂದರೆ ನನಗೇನು ಸಿಗುತ್ತೆ? ಅಥವಾ ಆಕೆ ಸತ್ತ ನಂತರ ಬಂದು ನನ್ನ ಕಾಡುತ್ತಾಳಾ ಎಂದು ಮರು ಪ್ರಶ್ನಿಸುತ್ತಿದ್ದ. ಹೆಚ್ಚು ವಿಚಾರಣೆ ನಡೆಸಿದಾಗ ಪತ್ನಿಯೊಂದಿಗೆ ಸಣ್ಣಪುಟ್ಟ ಜಗಳ ಆಗಿದ್ದು, ಆಕೆ ಸಿಟ್ಟಿನಲ್ಲಿ ನನಗೆ ಕಚ್ಚಿದ್ದಾಳೆ ಎಂದು ಕೈ ಮೇಲಿನ ಹಲ್ಲಿನ ಗುರುತು ತೋರಿಸಿದ್ದ. ಆದರೆ ಆಕೆ ಸಾವಿನಿಂದ ಪಾರಾಗಲು ಕಚ್ಚಿದ್ದು ಎಂಬುದು ವಿಚಾರಣೆ ವೇಳೆ ನಂತರ ಗೊತ್ತಾಗಿದೆ.
ವಿಚಾರಣೆ ವೇಳೆ ಪತ್ನಿಯನ್ನು ಯಾಕೆ ಕೊಂದಿದ್ದು ಎಂಬುದು ಮಾತ್ರ ಆತ ಬಾಯಿ ಬಿಟ್ಟಿಲ್ಲ. ಆದರೆ ಆತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.