ಕರ್ನಾಟಕದ 6 ನಕ್ಸಲರು ಶರಣಾಗಲು ವೇದಿಕೆ ಸಜ್ಜಾಗಿದ್ದು, ಶೀಘ್ರದಲ್ಲೇ ಮುಖ್ಯವಾಹಿನಿಗೆ ಬರಲಿದ್ದಾರೆ ಎಂದು ಹೇಳಲಾಗಿದ್ದು, ನಕ್ಸಲರ ವಿರುದ್ಧದ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಕೆಲವು ತಿಂಗಳ ಹಿಂದೆ ಚಿಕ್ಕಮಗಳೂರು ಬಳಿ ನಡೆದ ಕಾರ್ಯಾಚರಣೆಯಲ್ಲಿ ನಕಲ್ಸ್ ನಾಯಕ ಎನ್ ಕೌಂಟರ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ನಕ್ಸಲರ ಶರಣಾಗತಿಗೆ ಕ್ರಮಗಳನ್ನು ಕೈಗೊಂಡಿತ್ತು. ಅಲ್ಲದೇ ಎಎನ್ ಎಫ್ ಪಡೆಯಿಂದ ಮಲೆನಾಡಿದ ದಟ್ಟ ಕಾಡಿನಲ್ಲಿ ಕಾರ್ಯಾಚರಣೆ ನಡೆಸಿತ್ತು.
ನಕ್ಸಲ್ ಗುಂಪಿನಲ್ಲಿ ಗುರುತಿಸಿಕೊಂಡಿರುವ ಲತಾ, ಸುಂದರಿ, ಆನಂದ್, ವನಜಾಕ್ಷಿ, ಜಯಣ್ಣ ಸೇರಿದಂತೆ ಹಲವರು ಶರಣಾಗಲು ಮುಂದಾಗಿದ್ದು, ಈ ಸಂಬಂಧ ಚಿಕ್ಕಬಳ್ಳಾಪುರ ಎಸ್ ಪಿ ಸೇರಿದಂತೆ ಹಲವರನ್ನು ಭೇಟಿ ಮಾಡಿ ಶರಣಾಗತಿಯ ಪ್ರಸ್ತಾಪ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಸುಂದರಿ ಹಾಗೂ ಸೋದರ ಆನಂದ್ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿಗಳಾಗಿದ್ದಾರೆ. ಲತಾ ಮೇಲೆ 27 ಪ್ರಕರಣಗಳು ದಾಖಲಾಗಿದ್ದರೆ, ವನಜಾಕ್ಷಿ ಹಾಗೂ ಸುಂದರಿ ಮೇಲೆ ತಲಾ 11 ಪ್ರಕರಣಗಳಿವೆ.
ನಕ್ಸಲರು ಶರಣಾಗತಿ ಪ್ರಸ್ತಾಪ ಮುಂದಿಟ್ಟ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಅವರ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಕೇರಳದಲ್ಲಿ ಇವರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ.
ಲತಾ ಅವರ ಸೋದರ ಸುರೇಶ್ ಮೂಲಕ ನಕ್ಸಲರು ಶರಣಾಗತಿಯ ಪ್ರಸ್ತಾಪ ಮುಂದಿಟ್ಟಿದ್ದು, ಪ್ರಸ್ತಾಪ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಎಎನ್ ಎಫ್ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.