ಸಾರ್ವಜನಿಕ ಹಿತಾಸಕ್ತಿ ಎಲ್ಲದಕ್ಕಿಂತ ಮುಖ್ಯವಾಗಿದ್ದು, ರಸ್ತೆ, ನದಿ, ಕೆರೆ, ರೈಲ್ವೆ ಜಾಗ ಒತ್ತುವರಿ ಮಾಡಿಕೊಂಡು ಅತಿಕ್ರಮವಾಗಿ ನಿರ್ಮಿಸಲಾದ ದೇವಸ್ಥಾನ ಮತ್ತು ದರ್ಗಾ ಸೇರಿದಂತೆ ಯಾವುದೇ ಧಾರ್ಮಿಕ ಕಟ್ಟಡಗಳಾದರೂ ತೆರವುಗೊಳಿಸಿ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ನೀಡಿದ ಆದೇಶದಲ್ಲಿ ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಯಾವುದೇ ಧರ್ಮಕ್ಕೆ ಸೀಮಿತವಾಗದೇ ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾದ ದೇವಸ್ಥಾನ, ಮಸೀದಿ ಅಥವಾ ದರ್ಗಾ ಯಾವುದೇ ಧಾರ್ಮಿಕ ಕಟ್ಟಡಗಳಾದರೂ ನೆಲಸಮಗೊಳಿಸಿ ಎಂದು ಸೂಚಿಸಿದೆ.
ದೇಶದ ಹಲವು ರಾಜ್ಯಗಳಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಕುರಿತ ವಿಚಾರಣೆ ವೇಳೆ ಅತಿಕ್ರಮವಾಗಿ ನಿರ್ಮಿಸಲಾದ ಯಾವುದೇ ಧಾರ್ಮಿಕ ಕಟ್ಟಡವಾದರೂ ತೆರವುಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಉತ್ತರಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾದವರ ಮನೆ, ಧಾರ್ಮಿಕ ಕಟ್ಟಡಗಳ ಮೇಲೆ ಬುಲ್ಡೋಜರ್ ಹರಿಸುತ್ತಿಲ್ಲ. ಬದಲಾಗಿ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತಿದೆ ಎಂದು ಅಡ್ವೋಕೇಟ್ ಜನರಲ್ ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದರು.