ಚೆನ್ನೈನ ತಿರುವಲ್ಲೂರು ಜಿಲ್ಲೆಯ ಸಮೀಪ ಶುಕ್ರವಾರ ತಡರಾತ್ರಿ ಸಂಭವಿಸಿದ ಮೈಸೂರು ದರ್ಬಾಂಗ ರೈಲು ಅಪಘಾತದಲ್ಲಿ 12 ಬೋಗಿಗಳು ಹಳಿ ತಪ್ಪಿದ್ದು, 19 ಮಂದಿ ಗಾಯಗೊಂಡಿದ್ದಾರೆ.
ಮೈಸೂರು ದರ್ಬಾಂಗ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಸಿಗ್ನಲ್ ನಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ ಎಂದು ತಿಳಿದು ಬಂದಿದೆ.
ಚೆನ್ನೈ ಸಮೀಪದ ಕಾವರಪಟ್ಟೈ ನತ್ತ ತೆರಳುತ್ತಿದ್ದ ಮೈಸೂರು ದರ್ಬಾಂಗ ರೈಲಿಗೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, 8.27ಕ್ಕೆ ಪೊನ್ನಾರಿ ನಿಲ್ದಾಣಕ್ಕೆ ತಲುಪಬೇಕಿತ್ತು. ರೈಲಿನಲ್ಲಿ ಜರ್ಕ್ ಕಾಣಿಸಿಕೊಂಡ ಪರಿಣಾಮ ಪೈಲೆಟ್ ಮತ್ತೊಂದು ಹಳಿಯ ಮೇಲೆ ಹೋಗಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ರೈಲು 109 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದ್ದು, ಈ ವೇಳೆ ರೈಲಿನಲ್ಲಿ ಜರ್ಕ್ ಕಾಣಿಸಿಕೊಂಡಿದ್ದು, ಲೂಪ್ ಹಳಿ ಮೇಲೆ ಹೋಗಿದೆ. ಇದರಿಂದ ಸ್ಟೇಷನರಿ ವಸ್ತುಗಳನ್ನು ತುಂಬಿಕೊಂಡು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ.