ಬಿಜೆಪಿ ಕಾರ್ಯಕರ್ತನ ಶವ ಪಕ್ಷದ ಕಚೇರಿಯಲ್ಲಿ ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ದಕ್ಷಿಣ ಪಶ್ಚಿಮ ಬಂಗಾಳದ 24ನೇ ಪರಗಾನ್ಸ್ ನ ಉಶ್ತಿಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತ ಪೃಥ್ವಿರಾಜ್ ನಾಸ್ಕರ್ ಶವ ಪತ್ತೆಯಾಗಿದೆ.
ಬಿಜೆಪಿ ಕಾರ್ಯಕರ್ತನ ಸಾವಿನ ಹಿಂದೆ ತೃಣಮೂಲ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ಆದರೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ.
ನವೆಂಬರ್ 5ರಿಂದ ಪೃಥ್ವಿರಾಜ್ ನಾಸ್ಕರ್ ನಾಪತ್ತೆಯಾಗಿದ್ದಾನೆ ಎಂದು ಕುಟುಂಬದ ಸದಸ್ಯರು ದೂರು ನೀಡಿದ್ದರು. ಆದರೆ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ರಕ್ತದ ಮಡುವಿನಲ್ಲಿದ್ದ ಪೃಥ್ವಿರಾಜ್ ಶವ ಪತ್ತೆಯಾಗಿದೆ.
ವಿಚಾರಣೆ ವೇಳೆ ಮಹಿಳೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಇಬ್ಬರ ನಡುವೆ ಸಂಬಂಧ ಇದ್ದು, ಈ ವಿಷಯದಲ್ಲಿ ವಾಗ್ವಾದ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ವಿವರಿಸಿದ್ದಾಳೆ.
ಕೊಲೆ ಮಾಡಿದ ನಂತರ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದು, ಮೊಬೈಲ್ ಟ್ರ್ಯಾಕ್ ಮಾಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣ ಬಗೆಹರಿಯುತ್ತಿದ್ದಂತೆ ಸುಳ್ಳು ಆರೋಪ ಮಾಡಿದ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಪಕ್ಷ ತಿರುಗೇಟು ನೀಡಿದೆ.