ಪಂಚಮಸಾಲಿಗಳಿಗೆ ೨ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಿದ ಲಿಂಗಾಯತ ಮುಖಂಡರ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿದ್ದು, ಹೋರಾಟದ ನೇತೃತ್ವ ವಹಿಸಿದ್ದ ಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಹಲವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೈ ಪಂಚಮಸಾಲಿ ಎಂದು ಘೋಷಣೆ ಕೂಗುತ್ತಾ ಸಾವಿರಾರು ಹೋರಾಟಗಾರರು ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಪರಿಸ್ಥಿತಿ ನಿಯಂತ್ರಿಸಲು ಲಾಠಿಪ್ರಹಾರ ನಡೆಸಿದ್ದಾರೆ.
ಪ್ರತಿಭಟನೆಕಾರರು ಬ್ಯಾರಿಕೇಡ್ಗಳನ್ನು ಕಿತ್ತೆಸೆದು ಸುವರ್ಣಸೌಧಕ್ಕೆ ನುಗ್ಗಲು ಗೇಟ್, ಕಾಂಪೌಂಡ್ ಹಾರಲು ಯತ್ನಿಸಿದ್ದಾರೆ. ಕೆಲವು ದುಷ್ಕರ್ಮಿಗಳು ಈ ವೇಳೆ ಕಲ್ಲುತೂರಾಟ ನಡೆಸಿದ್ದರಿಂದ ಎಡಿಜಿಪಿ ನೇತೃತ್ವದ ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಟ್ರ್ಯಾಕ್ಟರ್ ಮೂಲಕ ಆಗಮಿಸಿದ ಹೋರಾಟಗಾರರು ಹಾಗೂ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಯ ಮೃತ್ಯುಂಜಯ ಸ್ವಾಮೀಜಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಕೊಂಡಸಕೊಪ್ಪದಿಂದ ಪಂಚಮಸಾಲಿ ಮುಖಂಡರು ಸುವರ್ಣಸೌಧದತ್ತ ತೆರಳುತ್ತಿದ್ದರು. ಬೃಹತ್ ಪ್ರಮಾಣದ ಹೋರಾಟಗಾರರು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಷ್ಟ್ರೀಯ ಹೆದ್ದಾರಿ- 4 ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸೇರಿದಂತೆ ಹಲವರನ್ನ ಪೋಲಿಸರ ವಶಕ್ಕೆ ಪಡೆದರು.