ಬೆಂಗಳೂರು: ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ನಾಲ್ಕು ದಿನ ಪೊಲೀಸ್ ಠಾಣೆಯಲ್ಲಿ ವಶದಲ್ಲಿರಿಸಿಕೊಂಡಿದ್ದಕ್ಕಾಗಿ 2.5 ಲಕ್ಷ ರೂ. ದಂಡ ಪಾವತಿಸುವಂತೆ ಪೊಲೀಸ್ ಇಲಾಖೆಗೆ ನ್ಯಾಯಾಲಯ ಆದೇಶಿಸಿದೆ.
4 ದಿನ ಅಕ್ರಮವಾಗಿ ವಶಕ್ಕೆ ಇರಿಸಿಕೊಂಡಿದ್ದನ್ನು ಪ್ರಶ್ನಿಸಿ ಲಗ್ಗರೆ ನಿವಾಸಿ ರವಿ ಅವರ ಪತ್ನಿ ಎಂ.ವಿ. ವರಲಕ್ಷ್ಮೀ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಅಕ್ರಮ ಬಂಧನಕ್ಕೆ ಒಳಗಾಗಿದ್ದ ಹೈಕೋರ್ಟ್ ನಿರ್ದೇಶನದಂತೆ ವಾಯುವ್ಯ ವಲಯದ ಡಿಸಿಪಿ ಸಲ್ಲಿಸಿದ ವಿಚಾರಣಾ ವರದಿಯಲ್ಲಿ ಅ.14ರಿಂದ ಅ.17ರವರೆಗೆ ರವಿಯನ್ನು ಗಂಗಮ್ಮಗುಡಿ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಇರಿಸಿದ್ದ ಅಂಶ ಸ್ಪಷ್ಟವಾಗಿ ತಿಳಿಯುತ್ತದೆ.
ಈ ಅಂಶವು ಜೋಗಿಂದರ್ ಕುಮಾರ್ ಹಾಗೂ ಉತ್ತರ ಪ್ರದೇಶದ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪಾಲಿಸಬೇಕು. ಇಲ್ಲವಾದರೆ ಸಂವಿಧಾನದ ಪರಿಚ್ಛೇದ 21 ಅಡಿ ದತ್ತವಾಗಿರುವ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಯ ಉಲ್ಲಂಘನೆಯಾಗುತ್ತದೆ ಎಂದು ಪೀಠ ಹೇಳಿದೆ.
ಅರ್ಜಿದಾರರ ಪತಿಯನ್ನು ಅ.14ರಿಂದ ಎಫ್ಐಆರ್ ದಾಖಲಿಸಿರುವವರೆಗೆ ಬಂಧನದಲ್ಲಿ ಇರಿಸಿದು ಅಕ್ರಮವಾಗಿದೆ. ಪ್ರಕರಣದಿಂದ ಉಂಟಾಗಿರುವ ದೈಹಿಕ ಹಾಗೂ ಮಾನಸಿಕ ಹಾನಿಗಾಗಿ ರವಿಗೆ ಸರ್ಕಾರ ಎರಡು ಲಕ್ಷ ರೂ. ಪರಿಹಾರ ಹಾಗೂ ಅರ್ಜಿದಾರೆಗೆ ವ್ಯಾಜ್ಯ ವೆಚ್ಚ ಎಂದು 50 ಸಾವಿರ ರೂ. ಪಾವತಿಸಬೇಕು. ತಪ್ಪಿತಸ್ಥ ಅಧಿಕಾರಿಗಳಿಂದ ಈ ಮೊತ್ತ ವಸೂಲಿ ಮಾಡಬೇಕು. ಇಲಾಖೆ ತನಿಖೆ ನಡೆಸಿದ ನಂತರ ಪೊಲೀಸ್ ಠಾಣೆ ಅಥವಾ ಇಲಾಖೆ ಅಧಿಕಾರಿಗಳ ವಿರುದ್ಧ ತಪ್ಪಿನ ಹೊಣೆ ನಿಗದಿಪಡಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಕಲ್ಲು ಒಡೆಯುವ ಕೆಲಸ ಮಾಡುವ ರವಿ ಅವರು ನಾಪತ್ತೆ ಮತ್ತು ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಇದರ ಪರಿಣಾಮ ಅವರ ಪತ್ನಿಯಾದ ಅರ್ಜಿದಾರರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಲು ಯತ್ನಿಸಿದ್ದರು. ಗಂಗಮ್ಮಗುಡಿ ಠಾಣಾ ಪೊಲೀಸರು ರವಿಯನ್ನು ಬಂಧಿಸಿರುವ ವಿಚಾರವನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಅ.16ರಂದು ಅರ್ಜಿದಾರೆಗೆ ತಿಳಿಸಿದ್ದರು.
ನಂತರ ಅರ್ಜಿದಾರೆ ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ಹೋಗಿ ಮನವಿ ಮಾಡಿದರೂ ತಮ್ಮ ಪತಿಯನ್ನು ಪೊಲೀಸರು ಬಿಡುಗಡೆ ಮಾಡಿಲ್ಲ ಎಂದು ದೂರು ನೀಡಿದ್ದರು. ಪತ್ನಿ ನೀಡಿದ್ದ ದೂರಿನಂತೆ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಠಾಣೆಗೆ ಅ.17ರಂದು ಸಂಜೆ 7.45ಕ್ಕೆ ಗಂಗಮ್ಮನ ಗುಡಿ ಪೊಲೀಸ್ ಠಾಣೆಗೆ ಭೇಟಿ ಪರಿಶೀಲಿಸಿದ್ದರು. ಇದಾದ ಬಳಿಕ ರವಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದ ಪೊಲೀಸರು, ಅ.18ರಂದು ಸಂಜೆ 5 ಗಂಟೆಗೆ ನಗರದ 49ನೇ ಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಅ.18ರಿಂದ ಅ.24ರ ಸಂಜೆ 5ಗಂಟೆವರೆಗೆ ಪೊಲೀಸರ ವಶಕ್ಕೆ ರವಿಯನ್ನು ಒಪ್ಪಿಸಿತ್ತು.
ಅರ್ಜಿದಾರರು ಅಷ್ಟಕ್ಕೆ ಸುಮ್ಮನಾಗದೆ, ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ಪತಿಯ ಬಂಧನವನ್ನು ಅಕ್ರಮ ಎಂದು ಘೋಷಿಸಬೇಕು ಮತ್ತು ಪತಿಯ ಬಿಡುಗಡೆಗೆ ಆದೇಶಿಸುವಂತೆ ಕೋರಿದ್ದರು.


