Tuesday, February 17, 2026
Google search engine
Homeಕಾನೂನುಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ: ಮೂವರಿಗೆ ಗಲ್ಲು ವಿಧಿಸಿ ಐತಿಹಾಸಿಕ ತೀರ್ಪು

ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ: ಮೂವರಿಗೆ ಗಲ್ಲು ವಿಧಿಸಿ ಐತಿಹಾಸಿಕ ತೀರ್ಪು

ಕೊಪ್ಪಳ: ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣದಲ್ಲಿ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.

ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಸೋಮವಾರ ಆರೋಪಿಗಳಿಗೆ ಮರಣ ದಂಡನೆ ವಿಧಿಸಿ ತೀರ್ಪು ಪ್ರಕಟಿಸುತ್ತಿದ್ದಂತೆ ಕೋರ್ಟ್​ನಲ್ಲಿ ಹಾಜರಿದ್ದ ಆರೋಪಿಗಳು ಬಿಕ್ಕಳಿಸಿ ಅತ್ತರು.

ಸಂಗಾಪುರ ಸಾಯಿನಗರದ ಗೌಂಡಿ ಕಾರ್ಮಿಕ ಮಲ್ಲೇಶ ಅಲಿಯಾಸ್ ಹಂದಿ ಮಲ್ಲ ಅಯ್ಯಪ್ಪ ದಾಸರ, ಮೇಷನ್ ಕೆಲಸಗಾರ ಚೇತನ್ ಸಾಯಿ ಕಾಮೇಶ್ವರರಾವ್, ಶರಣಪ್ಪ ಅಲಿಯಾಸ್ ಶರಣಬಸವರಾಜ್ ಎಂಬುವರು ಶಿಕ್ಷೆಗೊಳಗಾದ ಅಪರಾಧಿಗಳು.

ಇಸ್ರೇಲ್ ಮಹಿಳೆ ಸೇರಿದಂತೆ ಸ್ಥಳೀಯ ಮತ್ತೊಬ್ಬ ಮಹಿಳೆ ಮೇಲೆ ಅತ್ಯಾಚಾರ, ಓರ್ವ ಪ್ರವಾಸಿಗರ ಕೊಲೆ ಮತ್ತು ಅಮೆರಿಕ ಮತ್ತು ಮಹಾರಾಷ್ಟ್ರದ ತಲಾ ಒಬ್ಬ ಪ್ರವಾಸಿಗರನ್ನು ತುಂಗಭದ್ರಾ ಎಡದಂಡೆ ನಾಲೆಗೆ ತಳ್ಳಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದೆ.

ಅತ್ಯಾಚಾರ, ದರೋಡೆ, ಕೊಲೆ, ಸಂಚು, ಹಲ್ಲೆ, ದೌರ್ಜನ್ಯ ಸೇರಿದಂತೆ ಇತರ ಅಂಶಗಳನ್ನು ಪ್ರಕರಣದಲ್ಲಿ ಮನಗಂಡ ನ್ಯಾಯಾಧೀಶರು, ಒಂದು ಪ್ರಕರಣದಲ್ಲಿ ಮರಣ ದಂಡನೆ (ಬಿಎನ್ಎಸ್-301) ಉಳಿದ ಐದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದರು.

ಎಲ್ಲ ಆಯಾಮಗಳಲ್ಲಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು ಆರೋಪಿಗಳಿಗೆ ಮರಣ ದಂಡನೆ ವಿಧಿಸಿ ಐತಿಹಾಸಿಕ ಆದೇಶ ಮಾಡಿದ್ದಾರೆ. ಆದೇಶದ ಪ್ರತಿಯನ್ನು ಹೈಕೋರ್ಟ್​ಗೆ ಸಲ್ಲಿಸಲಾಗುವುದು. ಅಲ್ಲಿ ಪರಿಶೀಲನೆ ಮಾಡಿದ ಬಳಿಕ ಆದೇಶ ಜಾರಿಯಾಗುತ್ತದೆ ಎಂದು ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮಿ ಹೇಳಿದರು.

ಐತಿಹಾಸಿಕ ತೀರ್ಪು

ಕೊಪ್ಪಳ ಜಿಲ್ಲೆ ರಚನೆಯಾಗಿ ಎರಡೂವರೆ ದಶಕಗಳಲ್ಲಿ ಇದುವರೆಗೂ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆ ಪ್ರಕಟವಾಗಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರ, ಒಬ್ಬ ಪ್ರವಾಸಿಗನ ಕೊಲೆ ಪ್ರಕರಣದಲ್ಲಿ ಮರಣ ದಂಡನೆ ವಿಧಿಸುವ ಮೂಲಕ ಇಲ್ಲಿನ ಜಿಲ್ಲಾ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ಮರಕುಂಬಿಯಲ್ಲಿ ನಡೆದಿದ್ದ ದಲಿತ-ಸವರ್ಣೀಯರ ಗಲಾಟೆ ಪ್ರಕರಣದಲ್ಲಿ ದಲಿತರ ಮನೆಗಳನ್ನು ಸುಡಲಾಗಿತ್ತು ಎಂಬ ಪ್ರಕರಣದಲ್ಲಿ ಕೊಪ್ಪಳದ ಜಿಲ್ಲಾ ಕೋರ್ಟ್ 98 ಜನರಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಇದು ಕೊಪ್ಪಳ ಜಿಲ್ಲೆಯ ನ್ಯಾಯಾಲಯದ ಇತಿಹಾಸದಲ್ಲಿ ದೊಡ್ಡ ತೀರ್ಪಾಗಿತ್ತು. ಆದರೆ, 2025ರ ಮಾರ್ಚ್ 6ರಂದು ಗಂಗಾವತಿ ತಾಲೂಕಿನ ಸಣಾಪುರದಲ್ಲಿ ನಡೆದಿದ್ದ ಇಸ್ರೇಲ್ ದೇಶದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು.
ಪ್ರಕರಣದ ವಿವರ:
ಹಂಪಿ – ಆನೆಗೊಂದಿ ಭಾಗದಲ್ಲಿ ಪ್ರವಾಸಕ್ಕೆ ಬಂದಿದ್ದ ಇಸ್ರೇಲ್ ಮಹಿಳೆ, ಸ್ಥಳೀಯ ಹೊಟೇಲ್‌ವೊಂದರ ಮಾಲಕಿ ಸೇರಿ ಇಬ್ಬರು ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕದ ಹೊಟೇಲ್ ಬಳಿ ರಾತ್ರಿಯ ಕತ್ತಲು ಅಸ್ವಾದಿಸುತ್ತಾ ಗಿಟಾರು ಬಾರಿಸುತ್ತಾ ಕುಳಿತಿದ್ದರು. ತಡರಾತ್ರಿ ಸ್ಥಳಕ್ಕೆ ಆಗಮಿಸಿದ ಈ ದುರುಳರು, ಇಬ್ಬರ ಮೇಲೆ ಅತ್ಯಾಚಾರ ಎಸಗಿದ್ದರು. ಬಿಡಿಸಲು ಬಂದಿದ್ದ ಅಮೆರಿಕದ ಡೇನಿಯಲ್, ಮಹಾರಾಷ್ಟ್ರದ ನಾಸಿಕ್‌ನ ಪಂಕಜ್ ಪಟೇಲ್ ಮತ್ತು ಒಡಿಶಾದ ಬಿಬಾಸ್ ಎಂಬ ಯುವಕರ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಬಿಬಾಸ್ (43) ಎಂಬಾತನನ್ನು ಎಡದಂಡೆ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದರು.

6 ತಿಂಗಳಲ್ಲಿ ಆದೇಶ:
ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಒಬ್ಬ ಪ್ರವಾಸಿಗನ ಕೊಲೆ ಮಾಡಿದ ಪ್ರಕರಣವು, ನ್ಯಾಯಾಲಯಕ್ಕೆ ಬಂದ ಕೇವಲ ಆರು ತಿಂಗಳಲ್ಲಿ ತ್ವರಿತಗತಿಯಲ್ಲಿ ವಿಚಾರಣೆ ಮಾಡಿ ಆದೇಶ ಜಾರಿ ಮಾಡಿರುವುದು ಗಂಗಾವತಿಯ ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲು ಎಂದು ವಕೀಲರು ಹೇಳಿದ್ದಾರೆ.

ಕಳೆದ 2025ರ ಮಾರ್ಚ್ 6ರಂದು ಪ್ರಕರಣ ನಡೆದಿತ್ತು. ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸ್ ಇಲಾಖೆಗೆ 90 ದಿನಗಳ ಕಾಲವಕಾಶವಿತ್ತು. ಕೆಳ ಹಂತದ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲಿಸಿದ ಬಳಿಕ ಜಿಲ್ಲಾ ನ್ಯಾಯಾಲಯಕ್ಕೆ ಪ್ರಕರಣ ವಿಚಾರಣೆಗೆ ಬಂದ ಕೇವಲ ಆರು ತಿಂಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments