ಎಲ್ಸಿ ಪೆರ್ರಿ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗುಬಡಿದು ಡಬ್ಲ್ಯೂ ಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇ-ಆಫ್ ಪ್ರವೇಶಿಸಿದೆ.
ದೆಹಲಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 19 ಓವರ್ ಗಳಲ್ಲಿ 113 ರನ್ ಗೆ ಆಲೌಟಾಯಿತು. ಸುಲಭ ಗುರಿ ಬೆಂಬತ್ತಿದ ಆರ್ ಸಿಬಿ 15 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಆರ್ ಸಿಬಿ ಈ ಗೆಲುವಿನೊಂದಿಗೆ ಲೀಗ್ ನಲ್ಲಿ ಆಡಿದ 8 ಪಂದ್ಯಗಳಿಂದ ತಲಾ 4 ಗೆಲುವು ಸೋಲಿನೊಂದಿಗೆ 8 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಪ್ಲೇಆಫ್ ಪ್ರವೇಶಿಸಿತು. ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಸೋತರೂ 8 ಪಂದ್ಯದಲ್ಲಿ 5 ಜಯ ಹಾಗೂ 3 ಸೋಲಿನೊಂದಿಗೆ 10 ಅಂಕದೊಂದಿಗೆ 2ನೇ ಸ್ಥಾನ ಪಡೆದಿದೆ.
ಆರ್ ಸಿಬಿ ಗೆಲುವಿನಲ್ಲಿ ಎಲ್ಸಿ ಪೆರ್ರಿ ಮಹತ್ವದ ಪಾತ್ರ ವಹಿಸಿದರು. ಬೌಲಿಂಗ್ ನಲ್ಲಿ 15 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರೆ, ಬ್ಯಾಟಿಂಗ್ ನಲ್ಲಿ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 40 ರನ್ ಸಿಡಿಸಿ ಔಟಾಗದೇ ಉಳಿದರು.
ಆರ್ ಸಿಬಿ ಒಂದು ಹಂತದಲ್ಲಿ 39 ರನ್ ಗೆ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಆದರೆ ಪೆರ್ರಿ ಮತ್ತು ರಿಚಾ ಘೋಷ್ (ಅಜೇಯ 36) ಮುರಿಯದ ನಾಲ್ಕನೇ ವಿಕೆಟ್ ಗೆ 76 ರನ್ ಜೊತೆಯಾಟದಿಂದ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.