ಚಿಕ್ಕಬಳ್ಳಾಪುರದ ಚಾರಣಿಗರ ನೆಚ್ಚಿನ ತಾಣವಾದ ನಂದಿ ಬೆಟ್ಟ ಅಪಾಯದ ಅಂಚಿನಲ್ಲಿದ್ದು, ಕೇರಳದ ವಯನಾಡು ಮಾದರಿಯಲ್ಲಿ ಕುಸಿಯುವ ಭೀತಿ ಇದೆ ಎಂದು ಭೂವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ನಂದಿ ಬೆಟ್ಟಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಂದಿ ಬೆಟ್ಟದ ತಪ್ಪಲಿನಲ್ಲಿ ರೆಸಾರ್ಟ್ ಗಳು ತಲೆ ಎತ್ತುತ್ತಿವೆ. ಇದರಿಂದ 5 ನದಿಗಳ ಜಲಮೂಲವಾಗಿರುವ ನಂದಿ ಬೆಟ್ಟ ಪ್ರಾಕೃತಿಕ ವಿಕೋಪ ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪರಿಸರ ನಾಶದಿಂದ ನಂದಿ ಹಿಲ್ಸ್ ಗೆ ಅಪಾಯವಿದೆ. ಈ ಹಿನ್ನೆಲೆ ಕಮರ್ಶಿಯಲ್ ಯೋಚನೆ ನಿಲ್ಲಿಸಿ ಎಂದು ಪರಿಸರವಾದಿಗಳು ಹಾಗೂ ಭೂ ವಿಜ್ಞಾನಿಗಳು ಆಗ್ರಹಿಸಿದ್ದು, ಜನಜಾಗೃತಿಗಾಗಿ ಸೇವ್ ನಂದಿ ಹಿಲ್ಸ್ ಎಂಬ ಅಭಿಯಾನ ಆರಂಭಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ, ನಿರ್ಮಾಪಕ ಬಾಬು ರಾಜೇಂದ್ರ ಪ್ರಸಾದ್, ನಿರ್ದೇಶಕ ಆರ್ ಚಂದ್ರ, ಭೂ ವಿಜ್ಞಾನಿಗಳು, ಸೇರಿದ್ದಂತೆ ಅನೇಕ ಸಾಮಾಜಿಕ ಹೋರಾಟಗಾರರು ನಂದಿ ಬೆಟ್ಟ ಉಳಿಸಿ ಅಭಿಯಾನಕ್ಕೆ ಕರೆ ನೀಡಿದ್ದಾರೆ.
ಪರಿಸರವಾದಿ ಯಲ್ಲಪ್ಪ ರೆಡ್ಡಿ ಸೇರಿದಂತೆ ಅನೇಕರು ನಂದಿ ಹಿಲ್ಸ್ ಉಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಾಗೂ ಭೂ ಕುಸಿತದ ತೀವ್ರತೆಯನ್ನ ಅರಿಯುವಂತೆ ಒತ್ತಾಯಿಸಿದ್ದಾರೆ. ಕೂಡಲೇ ನಂದಿ ಬೆಟ್ಟದ ಪ್ರದೇಶವನ್ನು ಉಳಿಸುವಂತೆ ಸರ್ಕಾರಕ್ಕೆ ತಜ್ಞರಿಂದ ಅಧ್ಯಯನದ ವರದಿ ಸಲ್ಲಿಕೆಗೆ ಪರಿಸರವಾದಿಗಳು ಮುಂದಾಗಿದ್ದಾರೆ.
ನಂದಿ ಬೆಟ್ಟ ಇತಿಹಾಸ, ಪೌರಾಣಿಕ, ಜೀವ ವೈವಿಧ್ಯತೆ ಹೊಂದಿದೆ. ಹೀಗಾಗಿ ನಂದಿ ಬೆಟ್ಟವನ್ನು ಉಳಿಸಿ ಎಂದು ನಾವು ಹೋರಾಟ ಮಾಡ್ತೇವೆ. ನಂದಿ ಬೆಟ್ಟ ಐದು ನದಿಗಳ ಮೂಲ ಹೊಂದಿರುವ ಬೆಟ್ಟ. ಆದರೆ ವಿಪರ್ಯಾಸವೆಂದರೆ ಒಂದು ಲೀಟರ್ ನೀರಿಗಾಗಿ 50 ರೂ. ಕೊಟ್ಟು ನೀರು ಕುಡಿಯುತ್ತೇವೆ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.
ನಂದಿ ಬೆಟ್ಟ ಉಳಿಸಿ ಎಂದು ಸರ್ಕಾರದ 11 ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವ ಇಲಾಖೆಯಿಂದ ಸರಿಯಾಗಿ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಪರಿಸರವಾದಿಗಳು ಎಚ್ಚರಿಸಿದರು.