ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಕಳೆದ 38 ದಿನಗಳಲ್ಲಿ 406.73 ಕೋಟಿ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದೆ.
ರಾಜ್ಯದಾದ್ಯಂತ 406.73 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಇದರಲ್ಲಿ 177 ಕೋಟಿ ರೂ. ಮೌಲ್ಯದ ಮದ್ಯ ಸೇರಿದೆ. ಮದ್ಯ ಜಪ್ತಿಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಮೇಲೆ ಕಣ್ಣಿಟ್ಟಿರುವ ಚುನಾವಣಾ ಆಯೋಗ, ದಾಖಲೆ ಪ್ರಮಾಣದಲ್ಲಿ ದುಡ್ಡು, ಮದ್ಯ ಜಪ್ತಿ ಮಾಡಿದೆ.
ಮಾರ್ಚ್ 14 ರಂದು ಲೋಕಸಭಾ ಚುನಾವಣೆ ಘೋಷಣೆಯಾಗಿತ್ತು. ದೇಶದಲ್ಲಿ ಅಂದಿನಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿತ್ತು. ಏಪ್ರಿಲ್ 24 ಚುನಾವಣಾ ಪ್ರಚಾರ ಅಂತ್ಯಗೊಳ್ಳಲಿದ್ದು, ಅಂದಿನಿಂದ ಇಲ್ಲಿಯವರೆಗೆ ಅಂದರೆ 38 ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ದಾಖಲೆ ಇಲ್ಲದ ಹಣ, ಚಿನ್ನಾಭರಣ ಮತ್ತು ಮದ್ಯ ವಶಕ್ಕೆ ಪಡೆಯಲಾಗಿದೆ.
78 ಕೋಟಿ ರೂಪಾಯಿ ನಗದು, 177 ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇಡೀ ದೇಶದಲ್ಲೆ ಅತಿಹೆಚ್ಚಿನ ಪ್ರಮಾಣದ ಮದ್ಯದ ಜಪ್ತಿ ಇದಾಗಿದೆ.
ಉಳಿದಂತೆ 11.24 ಕೋಟಿ ರೂ. ಮೌಲ್ಯದ ಮಾದಕ ವಸ್ತು, 59 ಕೋಟಿ ರೂ. ಮೌಲ್ಯದ ಬೆಳ್ಳಿ, ಬಂಗಾರ ಹಾಗೂ ಡೈಮೆಂಡ್, 8.14 ಕೋಟಿ ರೂ. ಮೌಲ್ಯದ ಉಡುಗೊರೆಗಳಾದ ಮಿಕ್ಸರ್, ಫ್ಯಾನ್, ಕುಕ್ಕರ್ ಜಪ್ತಿ ಮಾಡಲಾಗಿದೆ. 72 ಕೋಟಿ ರೂ. ಮೌಲ್ಯದ ಇನ್ನಿತರ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.