ಸಂಸತ್ ಭವನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಅವರ ಪ್ರತಿಮೆಗಳ ಸ್ಥಳಾಂತರ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಹಳೇಯ ಸಂಸತ್ ಭವನದ ಬಳಿ ಇದ್ದ ಗಾಂಧೀಜಿ, ಅಂಬೇಡ್ಕರ್ ಮತ್ತು ಶಿವಾಜಿ ಅವರ ಪ್ರತಿಮೆಗಳನ್ನು ನೂತನ ಸಂಸತ್ ಭವನದ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ನೂತನ ಕಾಂಪ್ಲೆಕ್ಸ್ `ಪ್ರೇಮಾ ಸ್ಥಳ್’ ಎಂಬಲ್ಲಿ ಇವುಗಳನ್ನು ಸ್ಥಳಾಂತರಿಸಲಾಗುತ್ತಿದೆ.
ಕೇಂದ್ರೀಯ ಕೈಗಾರಿಕಾ ರಕ್ಷಣಾ ಸಿಬ್ಬಂದಿ ಈ ಪ್ರತಿಮೆಗಳನ್ನು ಸ್ಥಳಾಂತರಿಸುತ್ತಿದೆ. ಇದರಿಂದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಮಹಾತ್ಮರ ಪ್ರತಿಮೆಗಳನ್ನು ಏಕಾಏಕಿ ತೆರವುಗೊಳಿಸಿ ಅವರ ಆದರ್ಶನಗಳನ್ನು ಮೂಲೆಗುಂಪು ಮಾಡುವ ಪ್ರಯತ್ನ ಒಂದು ಕಡೆಯಾದರೆ ಮತ್ತೊಂದೆಡೆ ಸಂಸತ್ ಭವನದ ಭದ್ರತೆಗೆ ಅನುಮಾನ ವ್ಯಕ್ತಪಡಿಸಿದೆ.
18ನೇ ಲೋಕಸಭಾ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ಸಂಸತ್ ಭವನ ಪ್ರವೇಶಿಸುವ ವೇಳೆ ಈ ಪ್ರತಿಮೆಗಳನ್ನು ಸ್ಥಳಾಂತರಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ವಿವಾದದ ಬೆನ್ನಲ್ಲೇ ಸಂಸತ್ ಭವನದ ಕಾರ್ಯದರ್ಶಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮಹಾತ್ಮರ ಪ್ರತಿಮೆಗಳು ಒಂದೊಂದು ಕಡೆ ಇದ್ದಿದ್ದರಿಂದ ಸಾರ್ವಜನಿಕರಿಗೆ ಒಂದೇ ಕಡೆ ಎಲ್ಲಾ ಗಣ್ಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳು ಒಂದೇ ಕಡೆ ಇರಿಸಿ ದರ್ಶನಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ.
ಅಮೇಥಿ ಲೋಕಸಭಾ ಕ್ಷೇತ್ರದ ನೂತನ ಕಾಂಗ್ರೆಸ್ ಸಂಸದ ಗಣ್ಯರ ಪ್ರತಿಮೆಗಳನ್ನು ಸ್ಥಳಾಂತರಿಸುತ್ತಿರುವ ಫೋಟೊಗಳನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಇದೊಂದು ಅತ್ಯಂತ ಕೆಳಮಟ್ಟದ ಕೆಲಸ ಎಂದು ಟೀಕೆ ಮಾಡಿದ್ದರು.
16 ಅಡಿ ಎತ್ತರದ ಗಾಂಧೀಜಿಯ ಕಂಚಿನ ಪ್ರತಿಮೆ ಸಂಸತ್ ಭವನದ ಆಕರ್ಷಣೀಯ ಕೇಂದ್ರವಾಗಿದ್ದು, ಸಂಸದರು ಹಲವು ವರ್ಷಗಳಿಂದ ಈ ಪ್ರತಿಮೆ ಮುಂದೆ ಪ್ರತಿಭಟನೆ ಮಾಡುತ್ತಿದ್ದರು.