ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿವಿಧ ಇಲಾಖೆಯ ಸುಮಾರು 3 ಸಾವಿರ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ಮೂಲಕ 9 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮೇಜರ್ ಸರ್ಜರಿ ಮಾಡಿದೆ.
ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಎ, ಬಿ, ಸಿ ಮತ್ತು ಡಿ ಗ್ರೂಪ್ ನೌಕರರು ಸೇರಿದಂತೆ ಎಲ್ಲಾ ಇಲಾಖೆಗಳ ವರ್ಗಾವಣೆ ಮಾಡಿರುವ ಬಿಬಿಎಂಪಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಸಿದೆ.
ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯ ನಿರ್ವಹಣೆ ಅವಧಿಯನ್ನು ಪರಿಗಣಿಸಿ ವರ್ಗಾವಣೆ ಮಾಡಲಾಗುತ್ತಿದ್ದು, ವಲಯ, ಮಟ್ಟದಲ್ಲಿ ಸಾಮೂಹಿಕ ವರ್ಗಾವಣೆ ಮಾಡುವ ಮೂಲಕ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ದಿಟ್ಟ ಹೆಜ್ಜೆ ಇರಿಸಿದ್ದಾರೆ.
ಸಾಮೂಹಿಕ ವರ್ಗಾವಣೆ ವೇಳೆ ಆಯಕಟ್ಟಿನ ಹುದ್ದೆ ಮತ್ತು ಸ್ಥಳಕ್ಕೆ ವ್ಯಾಪಕ ಬೇಡಿಕೆ ಉಂಟಾಗಿದೆ. ರಾಜಕಾರಣಿಗಳಿಂದ ಹಿಡಿದು ಐಎಎಸ್ ಅಧಿಕಾರಿಗಳವರೆಗೂ ಶಿಫಾರಸ್ಸು ಹಾಗೂ ಒತ್ತಡಗಳು ಬಂದಿದ್ದು, ಎಲ್ಲಾ ಒತ್ತಡಗಳನ್ನು ನಿಭಾಯಿಸುವ ಮೂಲಕ ತುಷಾರ್ ಗಿರಿನಾಥ್ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.
ಆಯಕಟ್ಟಿನ ಜಾಗಕ್ಕೆ ನೇಮಕಗೊಳ್ಳಲು ಅಧಿಕಾರಿ ಮತ್ತು ಸಿಬ್ಬಂದಿ ಲಾಬಿ ನಡೆಸಿದ್ದು, ಆದರೆ ಯಾವುದೇ ಒತ್ತಡಕ್ಕೆ ಮಣಿಯದೆ ಸಾಮೂಹಿಕ ವರ್ಗಾವಣೆ ಮಾಡಲಾಗಿದೆ.
ಎ ಗ್ರೂಪ್ ನೌಕರರ ವರ್ಗಾವಣೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬಿ ಸಿ ಡಿ ಗ್ರೂಪ್ ನೌಕರರಿಗೂ ವರ್ಗಾವಣೆ ಪ್ರಕ್ರಿಯೆ ನಡೆದಿದೆ.
ಅನೇಕ ವರ್ಷಗಳಿಂದ ಆಯಕಟ್ಟಿನ ಸ್ಥಳದಲ್ಲಿ ಬೇರೂರಿದ್ದ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ಆಡಳಿತ ಯಂತ್ರ ಕುಸಿದಿತ್ತು. ವ್ಯಾಪಕ ಟೀಕೆಗಳ ಹಿನ್ನೆಲೆಯಲ್ಲಿ ಸಾಮೂಹಿಕ ವರ್ಗಾವಣೆ ನಡೆದಿದೆ ಎನ್ನಲಾಗಿದೆ. ಇದೇ ವೇಳೆ ಬಿಬಿಎಂಪಿ ಚುನಾವಣೆ ಯಾವುದೇ ಕ್ಷಣದಲ್ಲಿ ನಡೆಯುವ ಸಾಧ್ಯತೆ ಇರುವುದರಿಂದ ಈಗಲೇ ತಯಾರಿ ನಡೆದಿದೆ ಎಂದು ಕೂಡ ಹೇಳಲಾಗುತ್ತಿದೆ.
ಎ ಗ್ರೂಪ್ ನ ಸುಮಾರು 80 ಅಧಿಕಾರಿಗಳ ವರ್ಗಾವಣೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಸಲಾಗಿದೆ.
ಬಿ ಗ್ರೂಪ್ ನ 300 ಅಧಿಕಾರಿಗಳು, ಸಿ ಗ್ರೂಪ್ ನ 450 ಸಿಬ್ಬಂದಿ ಹಾಗೂ 500ಕ್ಕೂ ಹೆಚ್ಚು ಡಿ ಗ್ರೂಪ್ ಸಿಬ್ಬಂದಿ ವರ್ಗಾವಣೆ ಆಗಲಿದೆ.
ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್, ಉಪ ಆಯುಕ್ತ ಮಂಜುನಾಥ ಸ್ವಾಮಿ ಅವರ ನೇತೃತ್ವದಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, ಮಾಹಿತಿ ಬಹಿರಂಗವಾಗದಂತೆ ಕೌನ್ಸಿಲಿಂಗ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.