ಕೇರಳದ ಸಾಂಪ್ರದಾಯಿಕ ಹಬ್ಬವಾದ ಓಣಂ ದಿನದಂದು ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ ನಲ್ಲಿ ಯುವಕರು ರೀಲ್ಸ್ ಗಾಗಿ `ಮಲಬಾರಿ ಬಾಯ್ಸ್’ ಚಿತ್ರೀಕರಣ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು ಟ್ರಾಫಿಕ್ ನಿಂದ ವಾಹನ ಸವಾರರು ಎಷ್ಟು ಕಿರಿಕಿರಿ ಅನುಭವಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಟ್ರಾಫಿಕ್ ಮಧ್ಯದಲ್ಲಿ ಮಲಬಾರಿ ಬಾಯ್ಸ್ ಎಂದು ಹೇಳಿಕೊಂಡ ಯುವಕರ ಗುಂಪು ಟ್ರಾಫಿಕ್ ಮಧ್ಯದಲ್ಲೇ ಇನ್ ಸ್ಟಾಗ್ರಾಂ ರೀಲ್ಸ್ ಗಾಗಿ ಶೂಟಿಂಗ್ ಮಾಡಿದ್ದಾರೆ.
ಮಲಬಾರಿ ಬಾಯ್ಸ್ ಗಳು ಟ್ರಾಫಿಕ್ ಸಿಗ್ನಲ್ ನಲ್ಲಿ ರೀಲ್ಸ್ ಚಿತ್ರೀಕರಣ ಮಾಡಿ ವಾಹನ ಸವಾರರಿಗೆ ತೊಂದರೆ ಮಾಡಿದ ಬಗ್ಗೆ ಎಕ್ಸ್ ನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರನ್ನು ಆಗ್ರಹಿಸಿದ್ದಾರೆ.
ದಿಲ್ ಶಾದ್ ಎಂಬ ವ್ಯಕ್ತಿಯ ಪ್ರೊಫೈಲ್ ನಲ್ಲಿ ಈ ವೀಡಿಯೊ ಪೋಸ್ಟ್ ಮಾಡಲಾಗಿದ್ದು, ಮಲಬಾರಿ ಬಾಯ್ಸ್ ಫ್ರಮ್ ಸೌತ್ ಎಂದು ಶೀರ್ಷಿಕೆ ಹಾಕಿಕೊಂಡಿದ್ದಾನೆ. ವೀಡಿಯೊದಲ್ಲಿ ಯುವಕರು ಬಿಳಿ ಪಂಚೆ ಮತ್ತು ಶರ್ಟ್ ಧರಿಸಿ ಸಿಗ್ನಲ್ ಮಧ್ಯದಲ್ಲಿ ರೀಲ್ಸ್ ಮಾಡಿದ್ದಾರೆ. ಈ ವೀಡಿಯೊವನ್ನು ಸುಮಾರು 600ಕೆ ಮಂದಿ ವೀಕ್ಷಿಸಿದ್ದಾರೆ.
ಬೆಂಗಳೂರಿನ ಸಿಗ್ನಲ್ ನಲ್ಲಿ ಈ ರೀತಿ ರೀಲ್ಸ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ಮಂದಿ ಆತಂಕ ವ್ಯಕ್ತಪಡಿಸಿದ್ದು, ಇಂತಹ ವಿರುದ್ಧ ಸಂಚಾರಕ್ಕೆ ಅಡ್ಡಿಪಡಿಸಿದ ಕಾನೂನಿನ ಅಡಿ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಪೊಲೀಸರನ್ನು ಆಗ್ರಹಿಸಿದ್ದಾರೆ.