ಕಾಂಗ್ರೆಸ್ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 128 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಲ್ಲಿಕಾರ್ಜನ ಖರ್ಗೆ, ಈಗಾಗಲೇ 6 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ 128 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.
ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ತಕ್ಕಷ್ಟು ಸ್ಥಾನಗಳನ್ನು ಇಂಡಿಯಾ ಮೈತ್ರಿಕೂಟ ಪಡೆಯಲಿದೆ. ಕಾಂಗ್ರೆಸ್ 128 ಸ್ಥಾನಗಳಲ್ಲಿ ಗೆಲ್ಲಲಿದ್ದರೆ, ಮೈತ್ರಿ ಪಕ್ಷಗಳು ತಮ್ಮ ಪ್ರಾಬಲ್ಯ ಇರುವ ರಾಜ್ಯಗಳಲ್ಲಿ ಕೂಡ ಗೆಲುವು ಸಾಧಿಸಲಿವೆ. ಒಗ್ಗೂಡಿ ನಾವು ಕೆಲಸ ಮಾಡಿದ್ದರಿಂದ ಬಹುಮತಕ್ಕೆ ಬೇಕಾದ 272ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ಖರ್ಗೆ ಹೇಳಿದರು.
ಜೂನ್ 1ರಂದು ನಾವು ಮೈತ್ರಿಪಕ್ಷಗಳ ಸಭೆ ಕರೆದಿದ್ದೇವೆ. ಮತ ಎಣಿಕೆ ವೇಳೆ ಇವಿಎಂ ಯಂತ್ರವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಮತ್ತು ಅದನ್ನು ಹೇಗೆ ತಡೆಯಬೇಕು ಎಂಬ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಪ್ರಕಾರ ಮೈತ್ರಿ ಪಕ್ಷಗಳ ಕಾರ್ಯಕರ್ತರು ಮುನ್ನೆಚ್ಚರಿಕೆ ವಹಿಸಲಿದ್ದಾರೆ ಎಂದು ಖರ್ಗೆ ವಿವರಿಸಿದರು.
ಇದೇ ವೇಳೆ ಪ್ರಧಾನಿ ಅಭ್ಯರ್ಥಿಗೆ ನನ್ನ ವೈಯಕ್ತಿಕ ಆಯ್ಕೆ ರಾಹುಲ್ ಗಾಂಧಿ ಆಗಿದ್ದಾರೆ. ಏಕೆಂದರೆ ಅವರು ಯುವಕರನ್ನು ಪ್ರತಿನಿಧಿಸುತ್ತಾರೆ ಮತ್ತು ಕಾಂಗ್ರೆಸ್ ದೀರ್ಘ ಭವಿಷ್ಯಕ್ಕಾಗಿ ರಾಹುಲ್ ಸೂಕ್ತ ಆಯ್ಕೆ ಎಂದು ಖರ್ಗೆ ಹೇಳಿದರು.