ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆಗೆ ನೀಡಲಾಗಿದ್ದ ಅಧಿಸೂಚನೆಯನ್ನು ವಾಪಸ್ ಪಡೆದ ಕರ್ನಾಟಕದ ಸರ್ಕಾರದ ತೀರ್ಮಾನವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಮುಕ್ತ ತನಿಖೆ ಅಧಿಕಾರವನ್ನು ಹಿಂಪಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ದೇವರಾಜ ಅರಸು ಕಾಲದಲ್ಲಿಯೂ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂದರು.
ಈ ಹಿಂದೆ ನಾನು ಗೃಹ ಸಚಿವನಾಗಿದ್ದಾಗ ದೇಶದಲ್ಲೇ ಅತೀ ದೊಡ್ಡ ಪ್ರಕರಣಗಳಾಗಿದ್ದ ವೀರಪ್ಪನ್, ನಕಲಿ ಛಾಪಾ ಕಾಗದ ಹಗರಣದಲ್ಲಿ ಕರೀಂಲಾಲ್ ತೆಲಗಿ ಸೇರಿದಂತೆ ಮೂರು ಪ್ರಕರಣಗಳ ತನಿಖೆಗೆ ಶಿಫಾರಸು ಮಾಡಲಾಗಿತ್ತು. ಆದರೆ ಸಿಬಿಐ ತನಿಖೆ ಕೈಗೆತ್ತಿಕೊಳ್ಳಲು ನಿರಾಕರಿಸಿತು ಎಂದು ಅವರು ಹೇಳಿದರು.
ಸಾವಿರಾರು ಕೋಟಿ ಹಗರಣದ ತೆಲಗಿ, ಅಂತಾರಾಜ್ಯ ಪ್ರಕರಣಗಳಾದ ವೀರಪ್ಪನ್ ಮತ್ತು ಕೋಲಾರದಲ್ಲಿ ನಡೆದ ಹತ್ಯೆ ಪ್ರಕರಣಗಳ ತನಿಖೆ ನಡೆಸಲು ಆಗಲ್ಲ ಅಂತ ಹೇಳಿದ್ದ ಸಿಬಿಐ ಈಗ ಕಾಂಗ್ರೆಸ್ ನಾಯಕರನ್ನು ಹಾಗೂ ಸರ್ಕಾರವನ್ನು ಅಲ್ಲಾಡಿಸಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಖರ್ಗೆ ಹೇಳಿದರು.
ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಪ್ರತಿಪಕ್ಷಗಳನ್ನು ಹಳಿಯಲು ದಾಳಿ ನಡೆಸುತ್ತಿವೆ. ಯಾವ ತನಿಖೆ ಸಿಬಿಐ ನಡೆಸಬೇಕು ಯಾವುದು ಬೇಡ ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ ಎಂದು ಅವರು ಹೇಳಿದರು.