ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 20 ಸ್ಥಾನ ಹೆಚ್ಚು ಗೆದ್ದಿದ್ದರೆ ಬಿಜೆಪಿಯವರು ಜೈಲಲ್ಲಿ ಇರುತ್ತಿದ್ದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ದಕ್ಷಿಣ ಕಾಶ್ಮೀರದ ಅನಂತ್ ನಾಗ್ ನಲ್ಲಿ ಭಾಷಣ ಮಾಡಿದ ಅವರು ಬಿಜೆಪಿ ಕೇಂದ್ರೀಕರಿಸಿ ವಾಗ್ದಾಳಿ ನಡೆಸಿದರು.
ಬಿಜೆಪಿ ಚುನಾವಣೆಗೂ ಮುನ್ನ 400ಕ್ಕೂ ಅಧಿಕ (400 ಪಾರ್) ಎಂದು ಹೇಳಿಕೊಂಡು ಓಡಾಡಿದರು. ಆದರೆ 400 ಸ್ಥಾನ ಎಲ್ಲಿ? ಅವರಿಗೆ 244 ಸ್ಥಾನ ಕೂಡ ಗೆಲ್ಲಲು ಕಷ್ಟಪಡಬೇಕಾಯಿತು. ಒಂದು ವೇಳೆ ನಾವು 20 ಸ್ಥಾನ ಹೆಚ್ಚು ಗೆದ್ದಿದ್ದರೆ ಬಿಜೆಪಿಯವರು ಜೈಲಲ್ಲಿ ಇರುತ್ತಿದ್ದರು. ಅದಕ್ಕೆ ಅವರು ಲಾಯಕ್ಕು ಎಂದು ಖರ್ಗೆ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನದಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 234 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಬಿಜೆಪಿ ಬಹುಮತದ ಕೊರತೆ ಎದುರಿಸಿದರೂ ತೆಲುಗು ದೇಶಂ ಮತ್ತು ಜೆಡಿಯು ಬೆಂಬಲದಿಂದ ಸತತ ಮೂರನೇ ಬಾರಿ ಸರ್ಕಾರ ರಚಿಸಿತ್ತು.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಯವರನ್ನು ಜೈಲಿಗೆ ಹಾಕುತ್ತೇವೆ ಎಂಬ ಹೇಳಿಕೆ ಅವರ ತುರ್ತುಪರಿಸ್ಥಿತಿಯ ಮನಸ್ಥಿತಿಗೆ ಸಾಕ್ಷಿ ಎಂದು ತಿರುಗೇಟು ನೀಡಿದೆ.