ಪಾಕಿಸ್ತಾನವನ್ನು ಗೌರವ ಕೊಡಿ. ಇಲ್ಲದಿದ್ದರೆ ಅವರು ನಮ್ಮ ದೇಶದ ಮೇಲೆ ಅಣು ಬಾಂಬ್ ಹಾಕುತ್ತಾರೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನೆರೆಯ ಪಾಕಿಸ್ತಾನದ ಜೊತೆಗಿನ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆ ಹೊರತು, ಸೇನಾ ಸಮರದಿಂದ ಅಲ್ಲ. ಇದರಿಂದ ಭಾರತದ ಮೇಲಿನ ಅಣು ಬಾಂಬ್ ಭೀತಿ ಹೊಗಲಾಡಿಸಲು ಸಾಧ್ಯವಿಲ್ಲ ಎಂದರು.
ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹಾಳಾಗಿದ್ದು, ಇದನ್ನು ಸುಧಾರಿಸುವ ಪ್ರಯತ್ನಗಳು ಆಗಬೇಕು. ಮಾತುಕತೆ ಮೂಲಕ ನೆರೆಯ ರಾಷ್ಟ್ರದ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಗಳ ಹೆಚ್ಚಾಗುತ್ತಲೇ ಹೋಗುತ್ತವೆ ಎಂದು ಮಣಿಶಂಕರ್ ಅಯ್ಯರ್ ಹೇಳಿದರು.
ಪಾಕಿಸ್ತಾನದ ಬಳಿ ಅಣು ಬಾಂಬ್ ಇದೆ. ನಮ್ಮ ಬಳಿಯೂ ಇದೆ. ಆದರೆ ಯಾವುದೋ ತಲೆಕೆಟ್ಟ ವ್ಯಕ್ತಿ ಲಾಹೋರ್ ಮೇಲೆ ಬಾಂಬ್ ಹಾಕಿದರೆ ಕೆಲವೇ ಸೆಕೆಂಡ್ ಗಳಲ್ಲಿ ಭಾರತದ ಮೇಲೆ ಅಣು ಬಾಂಬ್ ಬೀಳಬಹುದು. ಪಾಕಿಸ್ತಾನದಿಂದ ಅಮೃತಸರ ತಲುಪಲು ಕೆಲವೇ ಸೆಕೆಂಡ್ ಗಳು ಕೂಡ ಬೇಕಾಗಿಲ್ಲ ಎಂದು ಅವರು ಎಚ್ಚರಿಸಿದರು.
ನಾವು ನೆರೆಯ ರಾಷ್ಟ್ರವನ್ನು ಗೌರವದಿಂದ ಕಾಣಬೇಕು. ಆಗ ಅವರು ಶಾಂತ ರೀತಿಯಿಂದ ವರ್ತಿಸುತ್ತಾರೆ. ಆದರೆ ತಲೆ ಕೆಟ್ಟವನು ಬಾಂಬ್ ಹಾಕಲು ನಿರ್ಧರಿಸಿದರೆ ಏನು ಅನಾಹುತ ಆಗುತ್ತದೆ ಎಂದು ಯೋಚಿಸಲೂ ಆಗುವುದಿಲ್ಲ ಎಂದು ಅಯ್ಯರ್ ವಿವರಿಸಿದರು.