ಶೂಟರ್ ಮನು ಬಾಕರ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಭಾನುವಾರ ನಡೆದ 10 ಮೀ. ಏರ್ ರೈಫಲ್ ವಿಭಾಗದ ಫೈನಲ್ ನಲ್ಲಿ ಮನು ಬಾಕರ್ ಪದಕ ಗೆಲ್ಲುವ ಮೂಲಕ ಶೂಟಿಂಗ್ ನಲ್ಲಿ ಭಾರತಕ್ಕೆ 12 ವರ್ಷಗಳ ನಂತರ ಪದಕ ತಂದುಕೊಟ್ಟ ಗೌರವಕ್ಕೆ ಪಾತ್ರರಾಗಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ ನ ರ್ಯಾಪಿಡ್ ಫೈರ್ ಪಿಸ್ತೂಲು ವಿಭಾಗದಲ್ಲಿ ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್ 10ಮೀ. ಏರ್ ಪಿಸ್ತೂಲು ವಿಭಾಗಗಳಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು. ನಾರಂಗ್ ಪ್ರಸ್ತುತ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಶೂಟಿಂಗ್ ವಿಭಾಗದ ಮುಖ್ಯಸ್ಥರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಭಾರತ ಶೂಟಿಂಗ್ ನಲ್ಲಿ ಹಲವು ಪದಕ ಗೆಲ್ಲುವ ವಿಶ್ವಾಸವಿದೆ. ನನ್ನದು ಆರಂಭ ಮಾತ್ರ. ಕಂಚು ಬಂದಿದ್ದಕ್ಕೆ ಖುಷಿ ಇದೆ. ಮುಂದಿನ ಬಾರಿ ಬೇರೆಯದ್ದೇ ಪದಕ ಬರಬಹುದು. ಫೈನಲ್ ಗೆ ನನ್ನ ಎಲ್ಲಾ ಎನರ್ಜಿಯನ್ನು ಬಳಸಿದ್ದೆ. ಒತ್ತಡವನ್ನು ನಿಭಾಯಿಸಲು ನನಗೆ ಭಗವದ್ಗಿತೆ ನೆರವಾಯಿತು ಎಂದು ಪದಕ ಗೆದ್ದ ನಂತರ ಮನು ಬಾಕರ್ ತಿಳಿಸಿದ್ದಾರೆ.
ನಾನು ಸಾಕಷ್ಟು ಬಾರಿ ಭಗವದ್ಗಿತೆ ಓದುತ್ತಿದ್ದೆ. ಭಗವದ್ಗಿತೆಯನ್ನು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ನೀನು ಕರ್ಮಗಳನ್ನು ಮಾಡು, ಫಲಾಫನುಗಳನ್ನು ನನಗೆ ಬಿಡು ಎಂದು. ಇದು ಫೈನಲ್ ನಲ್ಲಿ ನನ್ನ ತಲೆಯ ತುಂಬಾ ಓಡುತ್ತಿತ್ತು ಎಂದು ಮನು ಹೇಳಿದರು.