ಉತ್ತರ ಭಾರತ ಹಾಗೂ ಮಧ್ಯ ಭಾರತದ ಹಲವು ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಲಿದ್ದು, ಬಿಸಿಗಾಳಿ ಸುದೀರ್ಘ ಕಾಲ ಕಾಡಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಉಷ್ಣಾಂಶ ಇರಲಿದೆ. ಇದರಿಂದ ಜನರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.
ಗುಜರಾತ್, ಮಹಾರಾಷ್ಟ್ರ, ಉತ್ತರ ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಕನಿಷ್ಠ 6ರಿಂದ 8 ದಿನಗಳ ಕಾಲ ಉಷ್ಣಾಂಶ ಗರಿಷ್ಠ ಪ್ರಮಾಣದಲ್ಲಿ ಇರಲಿದೆ.
ಉತ್ತರ ಹಾಗೂ ಕೇಂದ್ರ ಭಾರತದ ರಾಜ್ಯಗಳಲ್ಲಿ ಬಿಸಿಲು ಕಾಡಲಿದ್ದು, ಸುಮಾರು 23 ರಾಜ್ಯಗಳಲ್ಲಿ ಬಿಸಿಲಿನ ಹೊಡೆತ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಡವರು ಈ ಬಿಸಿಲಿನ ಹೊಡೆತಕ್ಕೆ ಹೆಚ್ಚು ಸಂಕಷ್ಟ ಎದುರಿಸಲಿದ್ದಾರೆ ಎಂದು ಮಹಾಪಾತ್ರ ಹೇಳಿದ್ದಾರೆ.