ಕಲಬುರಗಿ ಜಿಲ್ಲೆಯ ನಾರಾಯಣಪುರ ಹಿನ್ನಿರಿನ ಬಳಿಯಿರುವ ಬಸವಸಾಗರ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡುವ 7200 ಕೋಟಿ ರೂ. ವೆಚ್ಚದ ಯೋಜನೆಯನ್ನು ಜಲ ಜೀವನ್ ಮಿಷನ್ ಅಡಿ ಆರಂಭಿಸಲಾಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಶೇ.50ರ ಪಾಲು ಹಾಗೂ ನಿರ್ವಹಣ ವೆಚ್ಚ ಸೇರಿದಂತೆ 3914.45 ಕೋಟಿ ರೂ. ಭರಿಸಲಿದೆ ಎಂದು ಹೇಳಿರುವ ಸಚಿವರು ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ 2011ರಂತೆ 22.14 ಲಕ್ಷ ಜನಸಂಖ್ಯೆ ಇದ್ದು, 2038ರ ವೇಳೆಗೆ ಈ ಎರಡೂ ಜಿಲ್ಲೆಗಳ ಜನಸಂಖ್ಯೆ 31.54 ಲಕ್ಷಕ್ಕೆ ಏರುವುದೆಂದು ನಿರೀಕ್ಷಿಸಲಾಗಿದ್ದು ಈ ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಗ್ರಾಮಗಳು ಹಾಗೂ ಜನವಸತಿಗಳಿಗೆ ಈ ಯೋಜನೆಯಡಿ ನೀರು ಪೂರೈಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದಿದ್ದಾರೆ.
ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಪ್ರಸ್ತುತ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ನೀರಿನ ಗುಣಮಟ್ಟ, ಪೂರೈಕೆಯಲ್ಲಿ ಕೊರತೆಯಂತಹ ಸವಾಲುಗಳನ್ನು ಎದುರಿಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು, ಈ ಎರಡೂ ಜಿಲ್ಲೆಗಳ ಅಂತರ್ಜಲ ಮೂಲಗಳು ದಿನದಿಂದ ದಿನಕ್ಕೆ ಕುಸಿಯುತ್ತಿರುವುದೂ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಸಿದ್ದಾರೆ. ಡಾ.ನಂಜುಂಡಪ್ಪ ಸಮಿತಿ ವರದಿಯಂತೆ ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಹಿಂದುಳಿದಿದ್ದು, ಈ ಯೋಜನೆಯಿಂದ ಈ ಎರಡೂ ಜಿಲ್ಲೆಗಳ 31.54 ಲಕ್ಷ ಜನರು ಪರಿಶುದ್ಧ ನೀರನ್ನು ಪಡೆಯಲಿದ್ದಾರೆ, ಇವರಲ್ಲಿ 10.43 ಲಕ್ಷ ಮಂದಿ ಪರಿಶಿಷ್ಟ ಜಾತಿ ಹಾಗೂ 3.05 ಮಂದಿ ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ನೀರು ಒದಗಿಸಲು ಸಾಧ್ಯವಾಗಲಿದೆ ಎಂದೂ ಮಾಹಿತಿ ನೀಡಿದ್ದಾರೆ.
ಬಸವಸಾಗರ ಯೋಜನೆ ಕಾರ್ಯಗತಗೊಂಡ ನಂತರ ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ನಾಗರಿಕರಿಕರಿಗೆ ಪ್ರತಿ ವ್ಯಕ್ತಿಗೆ ಪ್ರತಿನಿತ್ಯ 55 ಲೀಟರ್ ಶುದ್ಧ ನೀರು ಲಭ್ಯವಾಗಲಿದ್ದು, ಈ ಬೇಡಿಕೆಗೆ ಅನುಗುಣವಾಗಿ 2.80 ಟಿ.ಎಂ.ಸಿ ನೀರು ಅವಶ್ಯವಾಗುತ್ತದೆ. 7200 ರೂ.ಗಳ ಈ ಮಹತ್ವಯುತ ಯೋಜನೆಗೆ ಕಳೆದ ವಾರ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ದೊರೆತಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.