ಲೋಸಕಭಾ ಚುನಾವಣೆ ನಂತರ ಬಿಜೆಪಿ ಮತ್ತು ಆರ್ ಎಸ್ ಎಸ್ ನಡುವೆ ಭಿನ್ನಮತ ಸ್ಫೋಟಗೊಂಡಿದ್ದು, ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇದರ ಬೆನ್ನಲ್ಲೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತೇಪೆ ಹಚ್ಚಲು ಮುಂದಾಗಿದ್ದಾರೆ.
ನಿಜವಾದ ಸೇವಕ ಎಂದಿಗೂ ಅಹಂಕಾರಿ ಆಗಲು ಸಾಧ್ಯವಿಲ್ಲ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡುವ ಮೂಲಕ ಬಿಜೆಪಿ ಮತ್ತು ಆರ್ ಎಸ್ ಎಸ್ ನಡುವಿನ ಭಿನ್ನಾಭಿಪ್ರಾಯಕ್ಕೆ ತೇಪೆ ಹಚ್ಚಲು ಪ್ರಯತ್ನಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಕಳೆದುಕೊಂಡಿದ್ದು ಮಿತ್ರಪಕ್ಷಗಳ ಸಹಕಾರದಿಂದ ಸರ್ಕಾರ ರಚಿಸಿದೆ. ಈ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಮುಖಂಡರು ಬಿಜೆಪಿ ಸೋಲಿಗೆ ಅಹಂಕಾರವೇ ಕಾರಣ ಎಂದು ಹೇಳಿಕೆಗಳನ್ನು ನೀಡಿದ್ದರು. ಈ ಬಗ್ಗೆ ಬಿಜೆಪಿ ಮುಖಂಡರು ಆರ್ ಎಸ್ ಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಆರಂಭದಲ್ಲಿ ರಾಮನ ಮೇಲಿದ್ದ ಭಕ್ತಿ ಅಹಂಕಾರವಾಗಿ ಬದಲಾಗಿದೆ. ನಾಯಕರ ಅಹಂಕಾರದಿಂದಾಗಿ ಶ್ರೀರಾಮನೇ 241ಕ್ಕೆ ತಂದು ನಿಲ್ಲಿಸಿದ್ದಾನೆ ಎಂದು ಆರ್ ಎಸ್ ಎಸ್ ನಾಯಕ ಇಂದ್ರೇಷ್ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದರಿಂದ ಬಿಜೆಪಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಮೋಹನ್ ಭಾಗವತ್, ನಿಜವಾದ ಸೇವಕ ಅಹಂಕಾರಿ ಆಗಲು ಸಾಧ್ಯವಿಲ್ಲ. ಆತ ಬದ್ಥತೆ ಹೊಂದಿರುತ್ತಾನೆ. ಆತ ಏನಿದ್ದರೂ ಕರ್ತವ್ಯ ನಿರತನಾಗಿರುತ್ತಾನೆ ಎಂದು ಹೇಳಿಕೆ ನೀಡಿದ್ದಾರೆ.