7 ರಾಜ್ಯಗಳ 13 ಸ್ಥಾನಗಳಿಗೆ ಜುಲೈ 10ರಂದು ಉಪ ಚುನಾವಣೆ ನಿಗದಿಯಾಗಿದ್ದು, ಲೋಕಸಭಾ ಚುನಾವಣೆಯ ಸಮರದ ನಂತರ ಇದೀಗ ಇಂಡಿಯಾ ಮೈತ್ರಿಕೂಟ ಹಾಗೂ ಎನ್ ಡಿಎ ಮೈತ್ರಿಕೂಟದ ನಡುವೆ ಕಿರು ಸಮರಕ್ಕೆ ವೇದಿಕೆ ಸಿದ್ಧವಾಗಿದೆ.
ಕೇಂದ್ರ ಚುನಾವಣಾ ಆಯೋಗ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಿಸಿದ್ದು, ಜುಲೈ 13ರಂದು ಮತದಾನ ನಡೆಯಲಿದೆ.
ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರಿಂದ ಹಾಗೂ ಶಾಸಕರಾಗಿದ್ದವರ ಸಾವು ಸೇರಿದಂತೆ ನಾನಾ ಕಾರಣಗಳಿಗೆ ತೆರವಾಗಿರುವ 13 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಪಶ್ಚಿಮ ಬಂಗಾಳದ ರಾಯ್ ಗಂಜ್, ರಾಣಾಘಟ್, ದಕ್ಷಿಣ್, ಭಾಗ್ದಾಹ್, ಮಣಿಕಟ್ಲಾ, ಬಿಹಾರದ ರುಪೌಲಿ, ತಮಿಳುನಾಡಿನ ವಿಕ್ರವಾಂದಿ, ಮಧ್ಯಪ್ರದೇಶದ ಅಮ್ರಾವರ, ಉತ್ತರಾಖಂಡ್ ನ ಬದರೀನಾಥ್ ಮತ್ತು ಮಂಗಲೂರ್, ಪಂಜಾಬ್ ನ ಜಲಂಧರ್ ವೆಸ್ಟ್, ಹಿಮಾಚಲ ಪ್ರದೇಶದ ದೆಹ್ರಾ, ಹಮಿರ್ಪುರ್, ನಲಘಡ್, ಕರ್ನಾಟಕದ ಚನ್ನಪಟ್ಟಣದಲ್ಲಿ ಉಪ ಚುನಾವಣೆ ನಡೆಯಲಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದೂ ಅಲ್ಲದೇ ಕೇಂದ್ರದಲ್ಲಿ ಕೈಗಾರಿಕೆ ಸಚಿವರೂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ತೆರವುಗೊಳಿಸಿದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ.