ವಿದ್ಯಾರ್ಥಿಗಳು ಮೈ ಕಾಣುವಂತ ಹರಿದ ಜೀನ್ಸ್ ಹಾಗೂ ಟೀ-ಶರ್ಟ್ ಧರಿಸುವುದನ್ನು ನಿರ್ಬಂಧಿಸಿ ಮುಂಬೈ ಕಾಲೇಜು ಆದೇಶ ಹೊರಡಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದ ಮುಂಬೈನ ಚೆಮ್ಮೂರು ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್ ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜು ಇದೀಗ ಹರಿದ ಜೀನ್ಸ್ ಪ್ಯಾಂಟ್ ಮತ್ತು ಟೀ-ಶರ್ಟ್ ಧರಿಸುವುದನ್ನು ನಿಷೇಧಿಸಿದೆ.
ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಶಿಸ್ತು ಹಾಗೂ ಉತ್ತಮ ರೀತಿಯಲ್ಲಿ ಉಡುಪು ಧರಿಸಬೇಕು. ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ವಸ್ತ್ರ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ಪುರುಷ ವಿದ್ಯಾರ್ಥಿಗಳು ಅರ್ಧ ತೋಳಿನ ಹಾಗೂ ಪೂರ್ಣ ತೋಳಿನ ಟೀ-ಶರ್ಟ್ ಮತ್ತು ಪ್ಯಾಂಟ್ ಧರಿಸಬಹುದು. ವಿದ್ಯಾರ್ಥಿನಿಯರು ಭಾರತೀಯ ಹಾಗೂ ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಬಹುದು. ಆದರೆ ಮೈ ಕಾಣುವ ರೀತಿಯ ಹರಿದ ಜೀನ್ಸ್, ಟೀ-ಶರ್ಟ್, ಜೆರ್ಸಿ ಗಳನ್ನು ಧರಿಸುವಂತಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ವಿವರಿಸಿದೆ.
ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಿಜಾಬ್, ಬುರ್ಖಾ, ನಕಾಬ್, ಶಾಲು, ಬ್ಯಾಡ್ಜ್ ಗಳನ್ನು ತೆಗೆಸಲಾಗುವುದು. ನಂತರ ಕಾಲೇಜು ಆವರಣದಲ್ಲಿ ಓಡಾಡಬಹುದು ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ಕಾಲೇಜು ಆಡಳಿತ ಮಂಡಳಿಯ ಹೊಸ ಮಾರ್ಗಸೂಚಿ ಬಗ್ಗೆ ತಿಳಿಯದೇ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಲಾಗಿದೆ.