ಲಕ್ನೋ: ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ 250 ಹಜ್ ಯಾತ್ರಿಕರಿದ್ದ ವಿಮಾನ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಸೋಮವಾರ ಸಂಭವಿಸಿದೆ.
ಅಹಮದಾಬಾದ್ ನಲ್ಲಿ ವಿಮಾನ ದುರಂತದಲ್ಲಿ 274 ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಮತ್ತೊಂದು ಅಂತಹ ಘಟನೆ ಸ್ಪಲ್ಪದರಲ್ಲಿ ತಪ್ಪಿದಂತಾಗಿದೆ.
ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಸೌದಿಯಾ ಏರ್‌ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಲಕ್ನೋ ವಿಮಾನ ನಿಲ್ದಾಣದಲ್ಲಿ (Lucknow Airport) ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನ ಚಕ್ರಗಳು ರನ್ ವೇಗೆ (Runway) ಇಳಿಯುತ್ತಿದ್ದಂತೆ ಟೈಯರ್‌ನಿಂದ ಬೆಂಕಿ ಕಿಡಿಗಳು ಚಿಮ್ಮಿದ್ದು, ದಟ್ಟ ಹೊಗೆ ಹೊಮ್ಮಿದೆ. ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸದೇ ನೂರಾರು ಯಾತ್ರಿಕರು, ವಿಮಾನ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ.
SV3112 ಸಂಖ್ಯೆಯ ವಿಮಾನ ಶನಿವಾರ ರಾತ್ರಿ 10:45ಕ್ಕೆ ಜೆಡ್ಡಾದಿಂದ 250 ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿತ್ತು, ಸಿಬ್ಬಂದಿಗಳೂ ಇದ್ದರು. ಹಜ್‌ಗೆ ಹೊರಟಿದ್ದ ವೇಳೆ ಬೆಳಗ್ಗೆ 6:30ರ ಸುಮಾರಿಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ತುರ್ತು ಭೂಸ್ಪರ್ಶ ಮಾಡಿದೆ. ಈ ವೇಳೆ ವಿಮಾನದ ಟೈಯರ್‌ನಿಂದ ಬೆಂಕಿಯ ಕಿಡಿಗಳು ಚಿಮ್ಮಿದೆ ಜೊತೆಗೆ ಟೈರ್‌ನಿಂದ ದಟ್ಟ ಹೊಗೆ ಬಂದಿದೆ.


