ಮಂಚಕ್ಕೆ ಬರುವಂತೆ ಪದೇಪದೇ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಶಿಕ್ಷಕ, ಒಂದು ವೇಳೆ ಸಹಕರಿಸದೇ ಇದ್ದರೆ ಭವಿಷ್ಯ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಕಾಲೇಜಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ.
ಬಾಲಸೂರ್ ನಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಶೇ.95ರಷ್ಟು ಸುಟ್ಟ ಗಾಯಗಳಿಂದ ವಿದ್ಯಾರ್ಥಿನಿ ಮೃತಪಟ್ಟರೆ, ಆಕೆಯನ್ನು ರಕ್ಷಿಸಲು ಹೋದ ಮತ್ತೊಬ್ಬ ವಿದ್ಯಾರ್ಥಿನಿ ಶೇ.70ರಷ್ಟು ಸುಟ್ಟ ಗಾಯದೊಂದಿಗೆ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾಳೆ.
ಕಾಲೇಜಿನ ಡಿಪಾರ್ಟ್ ಮೆಂಟ್ ಮುಖ್ಯಸ್ಥನನ್ನು ಪೊಲೀಸರು ಬಂಧಿಸಿದ್ದು, ಈತ ಸೇರಿದಂತೆ ಕಾಲೇಜಿನ ಪ್ರಾಂಶುಪಾಲರನ್ನು ತತ್ ಕ್ಷಣದಿಂದಲೇ ಅಮಾನತು ಮಾಡಲಾಗಿದೆ. ಇಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸೂರ್ಯವಂಶಿ ಸೂರಜ್ ತಿಳಿಸಿದ್ದಾರೆ.
ಮೃತಪಟ್ಟ ವಿದ್ಯಾರ್ಥಿನಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ 7 ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಕೆ ನೊಂದಿದ್ದಳು. ಅಲ್ಲದೇ ಶಿಕ್ಷಕನ ವರ್ತನೆ ಖಂಡಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ದಿಢೀರನೆ ಎದ್ದು ಹೋದ ವಿದ್ಯಾರ್ಥಿನಿ ಪ್ರಿನ್ಸಿಪಾಲ್ ಕಚೇರಿ ಸಮೀಪ ತೆರಳಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿನಿ ಕಾರಿಡಾರ್ ನಲ್ಲಿ ನೋವು ತಾಳಲಾರದೇ ಓಡಲು ಆರಂಭಿಸಿದ್ದು, ಈ ವೇಳೆ ಮತ್ತೊಬ್ಬ ವಿದ್ಯಾರ್ಥಿ ಆಕೆಯನ್ನು ರಕ್ಷಿಸಲು ಹೋಗಿದ್ದಾನೆ. ಈ ವೇಳೆ ಬೆಂಕಿ ಆತನ ಟೀ-ಶರ್ಟ್ ಗೆ ಹಚ್ಚಿಕೊಂಡಿದ್ದು, ಆತ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


