ಏಕಾದಶಿ ಪ್ರಯುಕ್ತ ದೇವರ ದರ್ಶನದ ವೇಳೆ ಸಂಭವಿಸಿದ ನೂಕುನುಗ್ಗಲಿನಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 10 ಮಂದಿ ಭಕ್ತರು ಅಸುನೀಗಿದ ಭೀಕರ ಘಟನೆ ಆಂಧ್ರಪ್ರದೇಶದ ಕಾಶಿಬುಗ್ಗ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಂಭವಿಸಿದೆ.
ಶ್ರೀಕಾಕುಲಂ ಜಿಲ್ಲೆಯಲ್ಲಿರುವ ಕಾಶಿಬುಗ್ಗ ವೆಂಕಟೇಶ್ವರ ದೇವಸ್ಥಾನದಲ್ಲಿ ಏಕದಶಿ ವೇಳೆ ದೇವರ ವಿಗ್ರಹ ಹೊತ್ತೊಯ್ಯುತ್ತಿದ್ದ ವೇಳೆ ದೇವರ ನೋಡಲು ಭಕ್ತರು ಮುಗಿಬಿದ್ದಿದ್ದರಿಂದ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ.
ದೇವಸ್ಥಾನದ ಆವರಣದಲ್ಲಿ ಭಕ್ತರ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಭಯಾನಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆಘಾತ ವ್ಯಕ್ತಪಡಿಸಿದ್ದು, ಭಕ್ತರ ಸಾವು ಹೃದಯವಿದ್ರಾವಕ ಎಂದು ವಿಷಾದಿಸಿದ್ದಾರೆ.
ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತ ಘಟನೆ ಆಘಾತವನ್ನುಂಟು ಮಾಡಿದೆ. ಈ ದುರಂತ ಘಟನೆಯಲ್ಲಿ ಭಕ್ತರ ಸಾವು ಅತ್ಯಂತ ಹೃದಯವಿದ್ರಾವಕವಾಗಿದೆ. ಮೃ
ತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರಿಗೆ ತ್ವರಿತ ಮತ್ತು ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ನಾಯ್ಡು ತಿಳಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವಂತೆ ಸಿಎಂ ಹೇಳಿದ್ದಾರೆ.


