ಮಹಾಕುಂಭ ಮೇಳಕ್ಕೆ ಹೊರಟ್ಟಿದ್ದ 5 ಮಕ್ಕಳು, 11 ಮಹಿಳೆಯರು ಸೇರಿದಂತೆ 18 ಮಂದಿ ಪ್ರಯಾಣಿಕರು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ನೂಕುನುಗ್ಗಲಿನಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಅಸುನೀಗಿದ್ದಾರೆ.
ಮಹಾಕುಂಭ ಮೇಳಕ್ಕೆ ಹೊರಡಬೇಕಿದ್ದ ರೈಲು ತಡವಾಗಿ ಬಂದಿದ್ದರಿಂದ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಪ್ರಯಾಣಿಕರು ಮುಗಿಬಿದ್ದಿದ್ದರಿಂದ ಶನಿವಾರ ತಡರಾತ್ರಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಕಾಲ್ತುಳಿತದಲ್ಲಿ ಅಸ್ವಸ್ಥಗೊಂಡವನ್ನು ಕೂಡಲೇ ಸಮೀಪದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಮೂವರು ಮಕ್ಕಳು, 10 ಮಹಿಳೆಯರು ಮತ್ತು ಇಬ್ಬರು ಪುರುಷರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ನಂತರ ಮತ್ತೊಂದು ಆಸ್ಪತ್ರೆಯಲ್ಲಿ ಮತ್ತೆ ಮೂವರು ಮಕ್ಕಳು ಮೃತಪಟ್ಟಿರುವುದು ತಿಳಿದು ಬಂದಿತು.
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮರ್ಮು ಆಘಾತ ವ್ಯಕ್ತಪಡಿಸಿದ್ದಾರೆ. ರೈಲ್ವೆ ಇಲಾಖೆ ಮೃತ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ ತಲಾ 1 ಲಕ್ಷ ರೂ. ಪರಿಹಾರ ಮೊತ್ತ ಘೋಷಿಸಿದೆ.
ಮೃತಪಟ್ಟವರಲ್ಲಿ 9 ಮಂದಿ ಬಿಹಾರ, 8 ಮಂದಿ ದೆಹಲಿ, ಹರಿಯಾಣದ ಒಬ್ಬರು ಅಸುನೀಗಿದ್ದಾರೆ. ಮೃತ ಕುಟುಂಬಗಳಿಗೆ ಉಚಿತವಾಗಿ ಪ್ರಯಾಣಕ್ಕೆ ವ್ಯವಸ್ಥೆ ಮಾಡುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.


