Wednesday, December 24, 2025
Google search engine
Homeದೇಶದಟ್ಟ ಮಂಜಿನಿಂದ 7 ಬಸ್, 3 ಕಾರುಗಳ ಸರಣಿ ಅಪಘಾತ: 13 ಮಂದಿ ಸಜೀವದಹನ

ದಟ್ಟ ಮಂಜಿನಿಂದ 7 ಬಸ್, 3 ಕಾರುಗಳ ಸರಣಿ ಅಪಘಾತ: 13 ಮಂದಿ ಸಜೀವದಹನ

ದಟ್ಟ ಮಂಜಿನ 7 ಮತ್ತು 3 ಕಾರುಗಳು ಡಿಕ್ಕಿಯಾಗಿ ಸಂಭವಿಸಿದ ಸರಣಿ ಅಪಘಾತದಲ್ಲಿ 13 ಮಂದಿ ಸಜೀವದಹನಗೊಂಡ ಭೀಕರ ಘಟನೆ ದೆಹಲಿ-ಆಗ್ರಾ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದೆ.

ಮಂಗಳವಾರ ಮುಂಜಾನೆ ದಟ್ಟ ಮಂಜು ಆವರಿಸಿದ್ದರಿಂದ ಹಲವು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ 13 ಜನ ಸುಟ್ಟು ಕರಕಲಾಗಿದ್ದು, ಸುಮಾರು 25ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬಲ್ದೇವ್ ಪೊಲೀಸ್ ಠಾಣಾ ಪ್ರದೇಶದ ಬಳಿ ಮಂಗಳವಾರ ಬೆಳಗಿನ ಜಾವ ಈ ಅಪಘಾತ ಸಂಭವಿಸಿದ್ದು, ಡಿಕ್ಕಿಯ ಪರಿಣಾಮವಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

7ರಿಂದ 8 ಮಿನಿ ಬಸ್ ಗಳು ಒಂದು ಟೆಂಪೊ ಟ್ರಾವೆಲ್ಸರ್ ಮತ್ತು ಸಣ್ಣ ವಾಹನಗಳು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಹಲವು ವಾಹನಗಳು ಬೆಂಕಿ ಹೊತ್ತಿಕೊಂಡಿದ್ದು, ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಮಂಜಿನಿಂದಾಗಿ ದಾರಿ ಕಾಣದೇ ನಾಲ್ಕು ಬಸ್‌ ಮತ್ತು ಒಂದು ಕಾರು ಡಿಕ್ಕಿ ಹೊಡೆದಿದ್ದು, ಬಳಿಕ ಎಲ್ಲ ವಾಹನಗಳು ಡಿಕ್ಕಿ ರಭಸಕ್ಕೆ ಏಕಾಏಕಿ ಬೆಂಕಿಗೆ ಆಹುತಿಯಾಗಿವೆ. ಮಾಹಿತಿ ಪಡೆದ ಹಿರಿಯ ಅಧಿಕಾರಿಗಳು, ಅಗ್ನಿಶಾಮಕ ದಳದ ತಂಡ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ದುರಂತಕ್ಕೆ ದೆಹಲಿ, ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಆಘಾತ ವ್ಯಕ್ತಪಡಿಸಿದ್ದು, ಕೂಡಲೇ ನೆರವಿಗೆ ಧಾವಿಸುವಂತೆ ಸೂಚಿಸಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಲದೇವ್ ಸಮುದಾಯ ಆರೋಗ್ಯ ಕೇಂದ್ರ ಮತ್ತು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗಳಿಂದ ಪಾರಾದ ಪ್ರಯಾಣಿಕರನ್ನು ಸರ್ಕಾರಿ ಬಸ್‌ಗಳ ಮೂಲಕ ಅವರ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ದಟ್ಟವಾದ ಮಂಜಿನಿಂದಾಗಿ ಈ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಇದೆ. ತನಿಖೆ ಕೂಡ ನಡೆಯುತ್ತಿದೆ” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

“ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಮಂಗಳವಾರ ಬೆಳಗ್ಗೆ, ಅಯೋಧ್ಯೆಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಬಸ್‌ಗಳು ದಟ್ಟವಾದ ಮಂಜಿನಿಂದಾಗಿ ಪರಸ್ಪರ ಡಿಕ್ಕಿ ಹೊಡೆದಿವೆ. ಬಳಿಕ ಏಕಾಏಕಿ ಬೆಂಕಿಗೆ ಆಹುತಿಯಾದವು” ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ತಿಳಿಸಿದ್ದಾರೆ.

“ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು. ಇದುವರೆಗೆ 13 ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಟ್ಟ ವಾಹನಗಳನ್ನು ಸ್ಥಳದಿಂದ ತೆಗೆದುಹಾಕಲಾಗುತ್ತಿದೆ. ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಬಂದ್ ಆಗಿರುವ ಹೆದ್ದಾರಿಯನ್ನು ತೆರವು ಮಾಡಿ ಸಿಲುಕಿರುವ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ” ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.

ಮಥುರಾ ಜಿಲ್ಲಾಡಳಿತದ ಪ್ರಕಾರ, ಗಾಯಗೊಂಡವರಲ್ಲಿ ಬಿ.ಕೆ. ಶರ್ಮಾ (77), ಕಿಶನ್ ಸಿಂಗ್ (50), ಶಾಲು (30), ಅಜಯ್ ಕುಮಾರ್ (32), ಪ್ರಿಯಾಂಕಾ (27), ದೇವ್ ರೈ (45), ಶ್ರೀಕಾಂತ್ ಕುಮಾರಿ (30), ಆಶಿಶ್ ಶ್ರೀವಾಸ್ತವ್​ (28), ಉಸ್ಮಾನ್ (50), ಅಮನ್ ಯಾದವ್ (28), ಮುಕಾನ್ ಖಾನ್ (26), ಸುಮನ್ ಯಾದವ್ (25), ಪವನ್ ಕುಮಾರ್ (30), ಮುಬಿನ್ ಖಾನ್ (25), ಮತ್ತು ಘನಶ್ಯಾಮ್ (40) ಸೇರಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಅಪಘಾತದ ಬಳಿಕ ಸುಮಾರು 20 ಆಂಬ್ಯುಲೆನ್ಸ್‌ಗಳು ಬಂದು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments