ಗಾಜಿಯಾಬಾದ್ ನಲ್ಲಿ ಬೆಳಕಿಗೆ ಬಂದ ನಕಲಿ ರಾಯಭಾರ ಕಚೇರಿ ಹಾಗೂ ನಕಲಿ ರಾಯಭಾರಿಯನ್ನು ವಿಚಾರಣೆಗೊಳಪಡಿಸಿದ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಬಗೆದಷ್ಟು ಬೃಹತ್ ಹಗರಣಗಳು ಬೆಳಕಿಗೆ ಬರುತ್ತಿದೆ.
ಹಲವು ವರ್ಷಗಳಿಂದ ನಡೆಯುತ್ತಿದ್ದ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್ (47) ೧೬೨ ಬಾರಿ ಅಕ್ರಮವಾಗಿ ವಿದೇಶಿ ಪ್ರವಾಸ ಕೈಗೊಂಡಿದ್ದು, ಬಹುತೇಕ ಬಾರಿ ಯುನೈಟೆಡ್ ಅರಬ್ ಎಮಿರೆಟ್ಸ್ ಗೆ ಹೋಗಿ ಬಂದಿದ್ದಾನೆ.
ವೆಸ್ಟರಿಕಾ, ಸೆಬೊರ್ಗಾ, ಪೊವ್ಲಿಯಾ ಮತ್ತು ಲಡೊನಿಯಾ ಮುಂತಾದ ಸಣ್ಣ ರಾಷ್ಟ್ರಗಳ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಹರ್ಷವರ್ಧನ್ ಜೈನ್ ೨ ಅಂತಸ್ತಿನ ಐಷಾರಾಮಿ ಬಂಗಲೆಯಲ್ಲಿ ಇವು ಸೇರಿದಂತೆ ಹಲವು ರಾಷ್ಟ್ರಗಳ ರಾಷ್ಟ್ರಧ್ವಜ ರಾರಾಜಿಸುತ್ತಿದ್ದು, ಇವುಗಳನ್ನು ಬಳಸಿಕೊಂಡು ಸುಮಾರು 300 ಕೋಟಿ ರೂ. ಹಗರಣ ನಡೆಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ವೆಸ್ಟಾರಿಕಾ ದೇಶದ ಬ್ಯಾರನ್ ಎಂದು ಬಿಂಬಿಸಿಕೊಂಡಿದ್ದ ಹರ್ಷವರ್ಧನ್ ಜೈನ್ ಆ ದೇಶದ ನಂಬರ್ ಪ್ಲೇಟ್ ಇರುವ ಕಾರುಗಳನ್ನು ಬಳಸುತ್ತಿದ್ದ. ರಾಯಭಾರ ಕಚೇರಿ ಹೆಸರಿನಲ್ಲಿ ಮಾತ್ರವಲ್ಲದೇ ಹಲವು ರೀತಿಯ ಅಕ್ರಮ ಕೆಲಸಗಳಿಗೆ ಕೈ ಹಾಕಿದ್ದ. 2005ರಿಂದ ೨೦೧೫ರ ಅವಧಿಯಲ್ಲಿ 19 ದೇಶಗಳಿಗೆ ಪ್ರಯಾಣ ಬೆಳೆಸಿದ್ದು, ಯುಎಇಗೆ 54 ಬಾರಿ ಹಾಗೂ ಇಂಗ್ಲೆಂಡ್ ಗೆ 22 ಬಾರಿ ಪ್ರಯಾಣ ಮಾಡಿದ್ದಾನೆ. ಈ ಎರಡೂ ದೇಶಗಳಲ್ಲದೇ ಮಾರಿಷಸ್, ಫ್ರಾನ್ಸ್, ಕೆಮರೂನ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಭೇಟಿ ನೀಡಿದ್ದಾನೆ.
ದುಬೈ, ಯುಎಇ, ಯುರೋಪ್ ದೇಶ ಸೇರಿದಂತೆ ವಿವಿಧ ದೇಶಗಳ 25 ನಕಲಿ ಶೆಲ್ ಕಂಪನಿಗಳನ್ನು ತೆರೆದಿದ್ದ. ಅಲ್ಲದೇ 10 ವಿದೇಶಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದ. ಸಾಲ ಕೊಡಿಸುವುದು ಸೇರಿದಂತೆ ನಾನಾ ಆಮೀಷವೊಡ್ಡಿ ದೊಡ್ಡ ದೊಡ್ಡ ಕಂಪನಿಗಳಿಗೆ ಹಣಕಾಸಿನ ನೆರವು ಕೊಡಿಸುವ ಭರವಸೆ ನೀಡಿ ಸುಮಾರು 300 ಕೋಟಿ ರೂ. ವಂಚಿಸಿದ್ದಾನೆ. ಅದರಲ್ಲೂ ಸ್ವಿಜರ್ಲೆಂಡ್ ನ ಸಂಕಷ್ಟದಲ್ಲಿರುವ ಎರಡು ಕಂಪನಿಗಳಿಗೆ ಸಾಲ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.


