ನವದೆಹಲಿ: ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾ ದೆಹಲಿಗೆ ಬಂದಿಳಿಯುತ್ತಿದ್ದಂತೆಯೇ ರಾಷ್ಟ್ರೀಯ ತನಿಖಾದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದು, ಮೊದಲ ಫೋಟೊ ಬಿಡುಗಡೆ ಮಾಡಲಾಗಿದೆ.
ದೆಹಲಿಯ ಪಂಬಂ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅಮೆರಿಕ ಅಧಿಕಾರಿಗಳು ಭಾರತಕ್ಕೆ ತಹವ್ವೂರ್ ಹಸ್ತಾಂತರಿಸಿದರು. ತಹವ್ವೂರ್ ರಾಣಾನನ್ನು ಉಗ್ರ ನಿಗ್ರಹ ಕಾಯ್ದೆ ಅನ್ವಯ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದರು.
26/11 ಭಯೋತ್ಪಾದಕ ದಾಳಿಯ ಸಂಚುಕೋರ, ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ತಹವ್ವೂರ್ ಹುಸೇನ್ ರಾಣಾನನ್ನು ಗುರುವಾರ ದೆಹಲಿಯ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಬುಧವಾರ ವಿಶೇಷ ವಿಮಾನದಲ್ಲಿ ಅಮೆರಿಕದಿಂದ ಆತನನ್ನು ಗಡೀಪಾರು ಮಾಡಲಾಗಿತ್ತು.
ದಾಳಿ ನಡೆದು ಹಲವು ವರ್ಷಗಳ ನಂತರ ಆರೋಪಿಯ ಹಸ್ತಾಂತರ ನಡೆದಿದೆ. ಅಮೆರಿಕದ ನ್ಯಾಯಾಂಗ ಇಲಾಖೆ, ಸೈ ಮಾರ್ಷಲ್ಸ್, ಎನ್‌ಐಎ ತಂಡ, ಭಾರತದ ಗುಪ್ತಚರ ತಂಡಗಳ ಕಾರ್ಯಾಚರಣೆಯಿಂದ ಆರೋಪಿಯ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ’ ಎಂದು ಹೇಳಿದೆ.
ಅಮೆರಿಕದಿಂದ ಗಡೀಪಾರಾದ ರಾಣಾನನ್ನು ವಿಶೇಷ ವಿಮಾನದ ಮೂಲಕ ದೆಹಲಿಗೆ ಕರೆತರಲಾಗಿದೆ. ರಾಣಾನನ್ನು ಪಟಿಯಾಲ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು, ನ್ಯಾಯಾಲಯದ ಸುತ್ತಮುತ್ತ ಭದ್ರತೆ ಬಿಗಿ ಮಾಡಲಾಗಿದೆ. ಇದಕ್ಕೂ ಮುನ್ನ ಅಮೆರಿಕದಿಂದ ಗಡಿಪಾರಾಗಿದ್ದ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಬುಧವಾರ ಅಮೆರಿಕಾದಿಂದ ವಿಶೇಷ ವಿಮಾನದಲ್ಲಿ ಹೊರಟು ಗುರುವಾರ ಸಂಜೆ ದೆಹಲಿಗೆ ಕರೆತರಲಾಗಿದೆ.
ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತುರ್ತು ತಡೆಹಿಡಿಯುವಂತೆ ಕೋರಿ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ದೇಶದ ಸುಪ್ರೀಂ ಕೋರ್ಟ್ ವಜಾಗೊಳಿಸಿದ ನಂತರ ಭಾರತದ ತನಿಖಾಧಿಕಾರಿಗಳ ತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಿತ್ತು.
ಪ್ರಾಥಮಿಕ ಔಪಚಾರಿಕತೆಯ ನಂತರ ಆತನನ್ನು ಎನ್‌ಐಎ ಪ್ರಧಾನ ಕಚೇರಿಗೆ ಕರೆದೊಯ್ಯುವ ಸಾಧ್ಯತೆಯಿದೆ. ಉಗ್ರನನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೂ ಹಾಜರುಪಡಿಸಲಾಗುವುದು.ತರ ಭಯೋತ್ಪಾದಕ ರಾಣಾನನ್ನು ದೆಹಲಿಯ ಹೆಚ್ಚಿನ ಭದ್ರತೆ ಕಲ್ಪಿಸಲಾಗಿರುವ ತಿಹಾರ್ ಜೈಲಿನಲ್ಲಿ ಇರಿಸಬಹುದು. ಅಂತಿಮವಾಗಿ ವಿಚಾರಣೆಯನ್ನು ಎದುರಿಸಲು ಮುಂಬೈಗೆ ಸ್ಥಳಾಂತರಿಸಬಹುದು ಎಂದು ಮೂಲಗಳು ತಿಳಿಸಿವೆ.
ಉಗ್ರನ ಮೇಲೆ ಕ್ರಿಮಿನಲ್ ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವುದು, ಕೊಲೆ ಮತ್ತು ನಕಲಿ ದಾಖಲೆ ಸೃಷ್ಟಿ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ರಾಣಾ ಹಿಂದಿರುಗುವ ಮುನ್ನ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವೆ ಸಭೆ ನಡೆದಿತ್ತು. ನಂತರ ಅಮಿತ್ ಶಾ ಅವರು, ಈ ಹಸ್ತಾಂತರವು ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ದೊಡ್ಡ ಗೆಲುವು ಎಂದು ಬಣ್ಣಿಸಿದ್ದಾರೆ.
ಅಮೆರಿಕಗೆ ಪ್ರಧಾನಿ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅತ್ಯಂತ ದುಷ್ಟ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಲಾಗಿದೆ ಎಂದು ಘೋಷಿಸಿದ್ದರು. ಆದಾದ ಎರಡು ತಿಂಗಳ ನಂತರ ರಾಣಾನನ್ನು ಹಸ್ತಾಂತರಿಸಲಾಗಿದೆ.
ಉಗ್ರ ರಾಣಾ ಹಿನ್ನೆಲೆ;
ರಾಣಾ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ಮತ್ತು 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟ ಸಹಚರನಾಗಿದ್ದಾನೆ.
ನವೆಂಬರ್ 26, 2008ರಂದು ಪಾಕಿಸ್ತಾನದ 10 ಲಷ್ಕರ್-ಎ-ತೋಯ್ಬಾ ಭಯೋತ್ಪಾದಕರ ಗುಂಪು ಅರೇಬಿಯನ್ ಸಮುದ್ರದಲ್ಲಿ ಸಮುದ್ರ ಮಾರ್ಗವನ್ನು ಬಳಸಿಕೊಂಡು ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ ನುಸುಳಿ ಮುಂಬೈ ಸಿಎಸ್‌ಟಿ ರೈಲು ನಿಲ್ದಾಣ, ಎರಡು ಐಷಾರಾಮಿ ಹೋಟೆಲ್‌ಗಳು ಮತ್ತು ಯಹೂದಿ ಕೇಂದ್ರದ ಮೇಲೆ ಸಂಘಟಿತ ದಾಳಿ ನಡೆಸಿತ್ತು. ಮುಂಬೈನಲ್ಲಿ ನಡೆದ ಸುಮಾರು 60 ಗಂಟೆಗಳ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು.


