ನಟ ವಿಜಯ್ ಟಿವಿಕೆ ಪಕ್ಷದ ರ್ಯಾಲಿ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30ಕ್ಕೂ ಅಧಿಕ ಮಂದಿ ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ ಕರೂರಿನಲ್ಲಿ ಶನಿವಾರ ಸಂಭವಿಸಿದೆ.
ವಾರಾಂತ್ಯದಲ್ಲಿ ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ ಪಕ್ಷದ ಪ್ರಚಾರ ನಡೆಸುತ್ತಿರುವ ವಿಜಯ್ ರ್ಯಾಲಿಗೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿತ್ತು. ಆದರೆ ವಿಜಯ್ ನ್ಯಾಯಾಲಯದ ಮೊರೆ ಹೋಗಿ ಅನುಮತಿ ಪಡೆದಿದ್ದರು. ಈ ವೇಳೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿತ್ತು.
ಶನಿವಾರ ರ್ಯಾಲಿ ವೇಳೆ ವಿಜಯ್ ಭಾಷಣ ಮಾಡುತ್ತಿದ್ದಾಗ ವಿಜಯ್ ಅವರನ್ನು ಸಮೀಪದಿಂದ ನೋಡಲು ಉಂಟಾದ ನೂಕುನುಗ್ಗಲಿನಿಂದ ದುರ್ಘಟನೆ ಸಂಭವಿಸಿದ್ದು, 30ಕ್ಕೂ ಹೆಚ್ಚು ಮಂದಿ ಮೃತಪಟ್ಟರೆ 47ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರೂರಿನಲ್ಲಿ ರ್ಯಾಲಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ವಿಜಯ್ 6 ಗಂಟೆ ತಡವಾಗಿ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಅವರನ್ನು ನೋಡಲು ಜನರು ಮುಗಿಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದ್ದು, 25 ಮಹಿಳೆಯರು ಮತ್ತು 6 ಮಕ್ಕಳು ಮೃತಪಟ್ಟಿರುವುದನ್ನು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ತಮಿಳುನಾಡು ಸಚಿವರು ಹಾಗೂ ಶಾಸಕರು ದೌಡಾಯಿಸಿದ್ದು, ಮುಖ್ಯಮಂತ್ರಿ ಸ್ಟಾಲಿನ್ ಘಟನೆಯ ಮಾಹಿತಿ ಕೇಳಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ಷಣಕ್ಕೂ ಕಳವಳಕಾರಿ ಮಾಹಿತಿಗಳು ಬರುತ್ತಿವೆ. ನಾವು ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ರಕ್ಷಣಾ ಕಾರ್ಯದ ಕಡೆ ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದು ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


